ADVERTISEMENT

ನಿಲ್ದಾಣದಲ್ಲಿ ಪ್ರಯಾಣಿಕರಿಗೆ ‘ತಡೆ’

ಬಾಗೇಪಲ್ಲಿಯ ಕೆಎಸ್‌ಆರ್‌ಟಿಸಿ ಅವ್ಯವಸ್ಥೆ: ನಿತ್ಯವೂ ಸಾರ್ವಜನಿಕರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 9:00 IST
Last Updated 2 ಜೂನ್ 2018, 9:00 IST
ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿರುವುದು
ಬಸ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿರುವುದು   

ಬಾಗೇಪಲ್ಲಿ: ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಖ್ಯದ್ವಾರದ ಮುಂಭಾಗದ ಪಾದಚಾರಿ ರಸ್ತೆಯಲ್ಲಿ ಟೀ ಅಂಗಡಿಗಳು ತಲೆಎತ್ತಿವೆ. ಅಲ್ಲದೆ ಸರ್ಕಾರಿ, ಖಾಸಗಿ ಬಸ್‌ಗಳು ಹಾಗೂ ಆಟೊಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ಸುಗಮವಾಗಿ ಸಾಗಲು ಅನನುಕೂಲವಾಗಿದೆ.

ಅಲ್ಲದೆ ರಸ್ತೆಯಲ್ಲಿ ಬೈಕ್ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ನಿಲ್ದಾಣದಲ್ಲಿ ಬಸ್‌ಗಳು ನಿಲ್ಲಿಸಲು ಫ್ಲಾಟ್ ಪಾರಂ ವ್ಯವಸ್ಥೆ ಇದೆ. ಇಲ್ಲಿಯೇ ಬಸ್ ಚಾಲಕರು, ನಿರ್ವಾಹಕರು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಹಾಗೂ ಇಳಿಸಬೇಕು. ಆದರೆ ವಿಶಾಲವಾದ ಬಸ್ ನಿಲ್ದಾಣ ಇದ್ದರೂ ಬಸ್‌ಗಳನ್ನು ಪುಟ್‌ಪಾತ್‌ಗಳನ್ನು ನಿಲ್ಲಿಸುತ್ತಿದ್ದಾರೆ.

ನಿಲ್ದಾಣದ ಮುಖ್ಯದ್ವಾರದ ಬಳಿ ವಾಹನಗಳು ನಿಲ್ಲಿಸಲು ಅವಕಾಶ ಮಾಡಲಾಗಿದೆ. ಆದರೆ ಇಲ್ಲಿ ಟೀ ಅಂಗಡಿಯವರು, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ನಿಲ್ಲಿಸಿ ವಾಹನ ಸವಾರರಿಗೆ ಕಿರಿಕಿರಿ ಆಗುತ್ತಿದೆ. ಇದರಿಂದ ವಾಹನ ಸವಾರರಷ್ಟೇ ಅಲ್ಲದೇ, ಪಾದಚಾರಿಗಳಿಗೂ ಸಮಸ್ಯೆ ಆಗಿದೆ.

ADVERTISEMENT

ಬೆಳಗ್ಗೆ, ಸಂಜೆ ಇದೇ ಮುಖ್ಯರಸ್ತೆಯಲ್ಲಿ ವಿದ್ಯಾರ್ಥಿಗಳು ಅಪಾರ ಸಂಖ್ಯೆಯಲ್ಲಿ ಸಾಗುವರು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು, ಆಟೊಗಳು, ಟ್ಯಾಕ್ಸಿಗಳು ಪಾದಚಾರಿ ಮಾರ್ಗದಲ್ಲಿ ನಿಲ್ಲುವುದರಿಂದ ರಸ್ತೆಯ ಮಧ್ಯದಲ್ಲಿ ನಡೆಯಬೇಕಾಗಿದೆ.

‘ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆಯಬೇಕಾದರೆ ಅಂಗೈಯಲ್ಲಿ ಪ್ರಾಣ ಇಟ್ಟುಕೊಂಡು ನಡೆಯಬೇಕಾದ ಸ್ಥಿತಿ ಇದೆ’ ಎನ್ನುವರು ಪಟ್ಟಣದ ವಾಸಿ ಮನೋಹರ ಆಚಾರಿ.

ಕೆಲ ಅಧಿಕಾರಿಗಳು ಖಾಸಗಿ ಬಸ್‌ಗಳಿಂದ ಮಾಮೂಲಿ ಪಡೆಯುತ್ತಿರುವುದರಿಂದ ಖಾಸಗಿಯವರ ವಿರುದ್ಧ ಏನೂ ಮಾತನಾಡುತ್ತಿಲ್ಲ ಎಂದು ಕನ್ನಡ ಪರ ಸಂಘಟನೆಯ ಮುಖಂಡ ವೆಂಕಟೇಶ್ ದೂರುವರು.

ಪಾದಚಾರಿ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂದು ಪೊಲೀಸರು, ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರೂ ಪ್ರಯೋಜನ ಆಗುತ್ತಿಲ್ಲ. ನಿಲ್ದಾಣದಲ್ಲಿ ಹೆಸರಿಗೆ ಎನ್ನುವಂತೆ ಹೋಂಗಾರ್ಡ್‌ ಒಬ್ಬರನ್ನು ನೇಮಿಸಲಾಗಿದೆ. ಆದರೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಮಾತ್ರ ಪರಿಹಾರವಾಗಿಯೇ ಇಲ್ಲ.

ಕೂಡಲೇ ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಅಧಿಕಾರಿಗಳು, ಪೊಲೀಸರು ಸೇರಿ ನಿಲ್ದಾಣದ ಮುಖ್ಯದ್ವಾರದ ಮುಂದೆ ಹಾಗೂ ಪಾದಚಾರಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಮಾಡುವವರ ಹಾಗೂ ಟೀ ಮಾರುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.