ADVERTISEMENT

ನಿಲ್ಲದ ಪದವಿ ಪರೀಕ್ಷೆ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 8:00 IST
Last Updated 12 ಅಕ್ಟೋಬರ್ 2011, 8:00 IST

ಚಿಕ್ಕಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಗಳು ಬುಧವಾರದಿಂದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಆರಂಭ ಗೊಳ್ಳಲಿದ್ದು, ಕೆಲ ವಿದ್ಯಾರ್ಥಿಗಳಿಗೆ ಈವರೆಗೆ ಪ್ರವೇಶಪತ್ರ ದೊರೆತಿಲ್ಲ. ಕೆಲವು ಪ್ರವೇಶ ಪತ್ರಗಳಲ್ಲಿ ಅವರ ಭಾವಚಿತ್ರಗಳಿಲ್ಲ. ಕೆಲವರ ಪರೀಕ್ಷೆ ವಿಷಯಗಳು ಅದಲುಬದಲಾಗಿವೆ.

ಕಾಲೇಜು ಸಿಬ್ಬಂದಿ ಪ್ರವೇಶ ಪತ್ರಗಳನ್ನು ಹುಡುಕುವ ಮತ್ತು ಕಂಪ್ಯೂಟರ್‌ನಲ್ಲಿ ದಾಖಲೆಗಳನ್ನು ಪರಿಶೀಲಿಸುವ ಕಾರ್ಯದಲ್ಲಿ ಮಗ್ನವಾಗಿದ್ದರೆ, ವಿದ್ಯಾರ್ಥಿಗಳು ತಮಗೆ ಪ್ರವೇಶಪತ್ರಗಳು ಸಿಗುವುದೇ ಅಥವಾ ಇಲ್ಲವೇ ಎಂದು ಚಿಂತಾಕ್ರಾಂತರಾಗಿದ್ದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಮಂಗಳವಾರ ಬೆಳಿಗ್ಗೆ `ಪ್ರಜಾವಾಣಿ~ ಭೇಟಿ ನೀಡಿದಾಗ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕಂಪ್ಯೂಟರ್ ಮುಂದೆ ಕುಳಿತು ಬೆಂಗಳೂರು ವಿಶ್ವವಿದ್ಯಾಲಯದ ವೆಬ್‌ಸೈಟ್ ಪರಿಶೀಲಿಸಿ, ವಿದ್ಯಾರ್ಥಿಗಳ ಪ್ರವೇಶಪತ್ರದ ಕುರಿತು ಮಾಹಿತಿ ಪಡೆಯುತ್ತಿದ್ದರು. ಹೆಚ್ಚಾಗುತ್ತಿದ್ದ ವಿದ್ಯಾರ್ಥಿಗಳ ಗುಂಪನ್ನು ಅವರು ಸಮಾಧಾನಪಡಿಸುತ್ತಿದ್ದರು.

`ಪರೀಕ್ಷೆಗೆ ಮೇಜುಗಳ ಕೊರತೆ ಯಿರುವ ಕಾರಣ ಖಾಸಗಿ ಸಂಸ್ಥೆಗಳಿಂದ ಪ್ಲಾಸ್ಟಿಕ್ ಸ್ಟೂಲ್ ಮತ್ತು ಕಬ್ಬಿಣದ ಮೇಜುಗಳನ್ನು ತರಿಸಿಕೊಂಡಿದ್ದೇವೆ. ಪರೀಕ್ಷೆ ಕಾರ್ಯಕ್ಕೆ ಹಾಜರಾಗಲಿರುವ ಪ್ರಾಧ್ಯಾಪಕರ ಕುರಿತು ಸಂಪೂರ್ಣ ಮಾಹಿತಿ ದೊರೆತಿಲ್ಲ. ವಿದ್ಯಾರ್ಥಿಗಳ ಪೂರ್ಣಪಟ್ಟಿಯೂ ದೊರೆತಿಲ್ಲ. ಗೊಂದಲಮಯ ಸ್ಥಿತಿಯಲ್ಲೇ ಪರೀಕ್ಷೆಗಳನ್ನು ನಡೆಸಬೇಕಿದೆ~ ಎಂದು ಪರೀಕ್ಷಾ ಉಸ್ತುವಾರಿ ಹೊಂದಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ನಾರಾಯಣಸ್ವಾಮಿ ತಿಳಿಸಿದರು.

`ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಹುತೇಕ ಕೊಠಡಿಗಳಿಗೆ ಬೀಗ ಹಾಕಿರುವುದರಿಂದ ಅಲ್ಲಿಂದ ಮೇಜು ತರಲು ಸಾಧ್ಯವಾಗಿಲ್ಲ. ಮೇಜು ಸೌಲಭ್ಯ, ಪ್ರಾಧ್ಯಾಪಕರ ಉಪಸ್ಥಿತಿ ಮತ್ತು ವಿದ್ಯಾರ್ಥಿಗಳ ಪಟ್ಟಿಗೆ ಸೇರಿದಂತೆ ಇತರ ವಿಷಯ ಗಳನ್ನು ಕೇಳಲು ಕಾಲೇಜು ಪ್ರಾಂಶು ಪಾಲ ಪ್ರೊ.ಬಿ.ವಿ.ಕೃಷ್ಣಪ್ಪ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಕುಲಪತಿ ಯವರಿಗೆ ದೂರು ನೀಡಲಾಗಿದೆ~ ಎಂದು ಅವರು ತಿಳಿಸಿದರು.

`ಬುಧವಾರ ನಡೆಯಲಿರುವ ಪರೀಕ್ಷೆಗೆ ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆ ಸಂದರ್ಭದಲ್ಲಿ ನಿಗಾ ವಹಿಸಲು ಪ್ರಾಧ್ಯಾಪಕರ ಕೊರತೆಯಿದೆ. ಪರೀಕ್ಷೆ ಸಂದರ್ಭದಲ್ಲಿ ತೊಂದರೆಯಾಗದಿರಲಿ ಎಂದು ಕಂಪ್ಯೂಟರ್ ಮತ್ತು ಜೆರಾಕ್ಸ್ ಸಾಧನಗಳನ್ನು ಬಳಸಿಕೊಳ್ಳಲಿದ್ದೇವೆ~ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.