ADVERTISEMENT

ನೀರಿಗಾಗಿ ಆಗ್ರಹ: ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 4:56 IST
Last Updated 2 ಏಪ್ರಿಲ್ 2013, 4:56 IST

ಗೌರಿಬಿದನೂರು: ಪಟ್ಟಣದ ಕರೇಕಲ್ಲಹಳ್ಳಿ ವಿದ್ಯಾನಗರದಲ್ಲಿ ಮೂರು ತಿಂಗಳಿನಿಂದ ಕುಡಿಯವ ನೀರಿಗೆ ತೀವ್ರ ಸಮಸ್ಯೆ ಉಂಟಾಗಿದ್ದು, ಸಮರ್ಪಕ ನೀರು ಸರಬರಾಜಿಗೆ ಆಗ್ರಹಿಸಿದ ಸ್ಥಳೀಯರು  ಸೋಮವಾರ ನೀರಿನ ಟ್ಯಾಂಕರ್ ತಡೆದು, ಪುರಸಭೆ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕರೇಕಲ್ಲಹಳ್ಳಿ, ವಿದ್ಯಾನಗರ, ಕೆಎಲ್‌ಎನ್ ಬಡಾವಣೆಗಳಲ್ಲಿ ಮೂರು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದೆ. ಪುರಸಭೆ ಸಮರ್ಪಕವಾಗಿ ನೀರು ಸರಬರಾಜು ಮಾಡುವಲ್ಲಿ ವಿಫಲವಾಗಿದೆ. ಈ ವಾರ್ಡ್‌ಗಳಿಗೆ ಪುರಸಭೆ ವತಿಯಿಂದ ಪ್ರತಿ ದಿನ ಒದಗಿಸುತ್ತಿರುವ ಎರಡು ಟ್ಯಾಂಕರ್ ನೀರು ಸಾಕಾಗುತ್ತಿಲ್ಲ. ಕೆಲವರ ಮನೆಗಳ ಸಂಪ್‌ಗಳಿಗೆ ಟ್ಯಾಂಕರ್‌ನಿಂದ ಪೈಪ್ ಮೂಲಕ ನೀರು ಬಿಡುತ್ತಾರೆ. ಇತರರಿಗೆ 10ರಿಂದ 15 ಬಿಂದಿಗೆ ಹಿಡಿದುಕೊಳ್ಳಿ ಎನ್ನುತ್ತಾರೆ. ಇದು ಯಾವ ನ್ಯಾಯ? ವೃದ್ಧರು, ಮಕ್ಕಳಿರುವ  ಮನೆಗಳವರು ಹೇಗೆ ನೀರು ಹಿಡಿದುಕೊಳ್ಳುವುದು ಎಂದು ಇಲ್ಲಿನ ನಿವಾಸಿ ಸತ್ಯನಾರಾಯಣಶೆಟ್ಟಿ ಪುರಸಭೆ ಸದಸ್ಯರನ್ನು ಪ್ರಶ್ನಿಸಿದರು.

ವಿದ್ಯಾನಗರದಲ್ಲಿ ಕೊಳವೆ ಬಾವಿ ಕೊರೆಸಿ 20 ದಿನ ಕಳೆದರೂ ಪಂಪ್, ಮೋಟಾರ್ ಅಳವಡಿಸಿಲ್ಲ. ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರೆ ಬೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಈಗ ಒಬ್ಬರ ಮೇಲೊಬ್ಬರು ಹೇಳುತ್ತಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಶಿಕ್ಷಕ ಆದರ್ಶ, ಕೃಷ್ಣಪ್ಪ, ನಂಜುಂಡಪ್ಪ, ಚರಣ್ ಟೈಲರ್, ಲೈನ್‌ಮ್ಯಾನ್ ನಂಜಪ್ಪ, ರಾಜು ಹಾಗೂ ಪುರಸಭೆ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.