ADVERTISEMENT

ನೀರಿಗಾಗಿ ಮುದ್ದುಲಹಳ್ಳಿ ಜನರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 9:10 IST
Last Updated 19 ಫೆಬ್ರುವರಿ 2011, 9:10 IST

ಚಿಂತಾಮಣಿ: ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತಾಲ್ಲೂಕಿನ ಮುದ್ದುಲಹಳ್ಳಿಯ ನೂರಾರು ಗ್ರಾಮಸ್ಥರು ಶುಕ್ರವಾರ ನಗರದ ಜಿಲ್ಲಾ ಪಂಚಾಯಿತಿಯ ಗ್ರಾಮೀಣ ನೀರು ಸರಬರಾಜು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಕೊರೆದಿದ್ದ ಎರಡು ಕೊಳವೆ ಬಾವಿಗಳು ಬತ್ತಿ ಹೋಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಳೆದ ಒಂದು ತಿಂಗಳಿನಿಂದ ನೀರಿಗಾಗಿ ಪರದಾಡುತ್ತಿದ್ದಾರೆ.

ಕುಡಿಯುವ ನೀರಿಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಒತ್ತಾಯಿಸಿ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೂ ಇಲ್ಲಿಯವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮದ ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ ಬವಣೆಯಿಂದ ಪಡುತ್ತಿರುವ ಕಷ್ಟ ಹೇಳತೀರದಾಗಿದೆ. ಇನ್ನು ತೋಟದ ಬಾವಿಗಳು ಸಹ ವಿದ್ಯುತ್ ಅಭಾವದಿಂದ ನಿರುಪಯುಕ್ತವಾಗಿವೆ.

ಹಗಲು ವೇಳೆಯಲ್ಲಿ ವಿದ್ಯುತ್ ಅಭಾವ. ರಾತ್ರಿ ವೇಳೆಯಲ್ಲಿ ದೂರದ ತೋಟಗಳ ಬಳಿ ಹೋಗಲು ಅಸಾಧ್ಯ. ಪರಿಸ್ಥಿತಿ ಹೀಗಿದ್ದರೂ ಅಧಿಕಾರಿಗಳು ಸಮಸ್ಯೆ ಬಗ್ಗೆ ಯಾವುದೇ ರೀತಿಯ ಪರಿಹಾರ ಕ್ರಮಕೈಗೊಳ್ಳುವ ಕುರಿತು ಚಿಂತಿಸಿಲ್ಲ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹಲಗೆ ಬಾರಿಸುವುದರ ಜತೆ ಆಕ್ರೋಶದ ಘೋಷಣೆಗಳನ್ನು ಕೂಗುತ್ತಾ ಬಂದು ಕಚೇರಿಗೆ ಬೀಗ ಜಡಿದರು.

 ಎಇಇ ಸೋಮಣ್ಣ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರೂ ಪ್ರತಿಭಟನಾಕಾರರು ಸಮಾಧಾನವಾಗಲಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದರು. ನಂತರ ಪ್ರತಿಭಟನಾಕಾರರ ಮುಖಂಡರೊಂದಿಗೆ ಸೋಮಣ್ಣ ಗ್ರಾಮಕ್ಕೆ ತೆರಳಿ ಪರಿಸ್ಥಿತಿ ಗಮನಿಸಿ ತಕ್ಷಣ ಸೂಕ್ತ ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ತಾಲ್ಲೂಕು ಪಂಚಾಯಿತಿಯ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜಿ.ಪಂ.ಮಾಜಿ ಸದಸ್ಯ ಶ್ರೀರಾಮರೆಡ್ಡಿ, ಎಪಿಎಂಸಿಯ ಮಾಜಿ ನಿರ್ದೇಶಕ ಶಂಕರರೆಡ್ಡಿ, ಮುಖಂಡರಾದ ವಿ.ನಾರಾಯಣಸ್ವಾಮಿ, ಲಕ್ಷ್ಮಯ್ಯ, ರಾಜಣ್ಣ, ವಿ.ರವಿ, ದೊಡ್ಡನಾರೆಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.