ADVERTISEMENT

ನೀರಿಲ್ಲದೆ ಚಿತ್ರಾವತಿ ಬ್ಯಾರೇಜು ಬರಿದು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 12:15 IST
Last Updated 12 ಅಕ್ಟೋಬರ್ 2012, 12:15 IST

ಬಾಗೇಪಲ್ಲಿ: ಪಟ್ಟಣ ಹೊರವಲಯದ ಪರಗೋಡು ಚಿತ್ರಾವತಿ ಬ್ಯಾರೇಜಿನಲ್ಲಿ ಕುಡಿಯುವ ನೀರಿಲ್ಲದೆ ಜೇಡಿ ಮಣ್ಣಿನ ನೀರು ಆವರಿಸಿಕೊಂಡಿದೆ. ಇದರಿಂದ ಪಟ್ಟಣದ ಜನತೆಗೆ ತೊಂದರೆಯುಂಟಾಗಿದೆ. ಚಿಕ್ಕಬಳ್ಳಾಪುರ ಹಾಗೂ ಬಾಗೇಪಲ್ಲಿ ತಾಲ್ಲೂಕುಗಳಲ್ಲಿ ಸಮರ್ಪಕವಾಗಿ ಮಳೆಯಾಗದ ಕಾರಣ ಚಿತ್ರಾವತಿ ಬ್ಯಾರೇಜು ನಿಧಾನವಾಗಿ ಬರಿದಾಗತೊಡಗಿದೆ.

ಒಂದೆಡೆ ಬರಗಾಲದ ಛಾಯೆ ಆವರಿಸಿಕೊಂಡಿದ್ದರೆ, ಮತ್ತೊಂದೆಡೆ ಮುಂಗಾರು ಮಳೆಯಿಲ್ಲದೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಇದರಿಂದ ಬಾಗೇಪಲ್ಲಿ ಮತ್ತು ಗುಡಿಬಂಡೆ ಪಟ್ಟಣಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿತ್ರಾವತಿ ಬ್ಯಾರೇಜಿನಲ್ಲಿ ಈಗ ಜೇಡಿಮಣ್ಣಿನ ಮಿಶ್ರಿತ ನೀರು ಮಾತ್ರವೇ ಉಳಿದುಕೊಂಡಿದೆ. ನೀರನ್ನು ಪಂಪ್ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಯಿದೆ. ಈ ಎಲ್ಲದರ ಪರಿಣಾಮ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಸಿಗದೇ, ಗಂಭೀರ ಪರಿಸ್ಥಿತಿ ತಲೆದೋರಲಿದೆ.

ಗೋಳು ಕೇಳುವರ‌್ಯಾರು?: `ಪಟ್ಟಣದಲ್ಲಿ ಕುಡಿಯುವ ನೀರಿಲ್ಲದೆ ಬೇರೆಡೆಯಿಂದ ತರಬೇಕಾದ ಪರಿಸ್ಥಿತಿ ಬಂದಿದೆ. ಸರಬರಾಜು ಆಗುವ ನೀರು ದುರ್ನಾತ ಬೀರುತ್ತಿದೆ. ಸ್ಥಿತಿವಂತರು ಖಾಸಗಿ ಕಂಪೆನಿಗಳ ನೀರು ಖರೀದಿಸುತ್ತಾರೆ. ಆದರೆ ಬಡ ಕೃಷಿ-ಕೂಲಿ-ಕಾರ್ಮಿಕರು ಅನ್ಯ ಮಾರ್ಗವಿಲ್ಲದೆ ನೀರು ಕುಡಿಯಬೇಕಾಗಿದೆ ಎಂದು 7ನೇ ವಾರ್ಡ್‌ನ ನಿವಾಸಿ ಕಲಾವತಿ ತಿಳಿಸಿದರು.

`ಚಿತ್ರಾವತಿ ಬ್ಯಾರೇಜಿನ ಪಂಪ್‌ಹೌಸ್‌ನ ಸುತ್ತಮುತ್ತಲಿನ ಗುಂಡಿಗಳಲ್ಲಿ ಶೇಖರಣೆ ಆಗಿರುವ ನೀರನ್ನು ಬುಧವಾರ ಇಟಾಚಿಗಳಿಂದ ಕಾಲುವೆ ಮೂಲಕ ಪಂಪ್‌ಹೌಸ್‌ನ ಕೆಳಗೆ ಹರಿಸಲಾಗಿದೆ. ಪಂಪ್‌ಹೌಸ್‌ನ ಕಳಗೆ ಇರುವ ನೀರು ಕಲುಷಿತಗೊಂಡಿದೆ. ಚಿತ್ರಾವತಿ ಬ್ಯಾರೇಜಿನಲ್ಲಿ ಇರುವ ನೀರು ಒಂದು ವಾರದೊಳಗೆ ಮುಗಿಯುವ ಹಂತದಲ್ಲಿದೆ ಎಂದು ಚಿತ್ರಾವತಿ ಹೋರಾಟ ಸಮಿತಿ ಮುಖಂಡ ಮಂಜುನಾಥರೆಡ್ಡಿ ತಿಳಿಸಿದರು.

`ಚಿತ್ರಾವತಿ ಬ್ಯಾರೇಜಿನಲ್ಲಿ ಹೂಳು ತೆಗೆಯಬೇಕು ಎಂದು ಆಗ್ರಹಿಸಿ ಹೋರಾಟ ಸಮಿತಿಯು ಸತತ 20 ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ಆದರೆ ಸಂಬಂಧಪಟ್ಟ ಯಾರೊಬ್ಬರೂ ಸ್ಥಳ ಪರಿಶೀಲನೆ ನಡೆಸಿ, ಹೂಳು ತೆಗೆಸುವ ಕಾರ್ಯ ಕೈಗೊಂಡಿಲ್ಲ. ಮುಂದೆ ಬಾಗೇಪಲ್ಲಿ ಹಾಗೂ ಗುಡಿಬಂಡೆ ಪಟ್ಟಣ ಬಂದ್‌ಗೆ ಕರೆ ನೀಡಲಾಗುವುದು~ ಎಂದು ಹೋರಾಟ ಸಮಿತಿ ಮುಖಂಡ ಚನ್ನರಾಯಪ್ಪ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.