ADVERTISEMENT

ನೇರ ಮಾರಾಟಕ್ಕೆ ಸಲಹೆ

ರೈತರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 10:26 IST
Last Updated 25 ಡಿಸೆಂಬರ್ 2012, 10:26 IST

ಚಿಂತಾಮಣಿ: ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬೇಕಾದರೆ ರೈತರು ಗುಂಪುಗಳಲ್ಲಿ ಕೃಷಿ ಚಟುವಟಿಕೆಕೈಗೊಳ್ಳುವ ಜೊತೆಗೆ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥಗೌಡ ಸಲಹೆ ನೀಡಿದರು.

ತಾಲ್ಲೂಕಿನ ಕುರುಬೂರು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಂಬಾಜಿದುರ್ಗ ಹೋಬಳಿಯ ರಾಯಪಲ್ಲಿ ಗ್ರಾಮದಲ್ಲಿ ಸೋಮವಾರ ನಡೆದ ರೈತರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವ್ಯವಸಾಯವನ್ನು ಮಾಡುವ ಜತೆಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ ಮತ್ತಿತರ ಉಪಕಸಬುಗಳನ್ನು ಕೈಗೊಳ್ಳಬೇಕು. ಮಣ್ಣು ಪರೀಕ್ಷೆ  ಮಾಡಿಸಿ  ನೀರು ಮತ್ತು ಮಣ್ಣಿನ ಫಲವತ್ತತೆಯ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಿದರು.

ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಡಾ.ನಹೀಮ್ ಪಾಷ ಮಾತನಾಡಿ, ಕೃಷಿ ಇಲಾಖೆಯಲ್ಲಿ ರೈತರಿಗೆ ದೊರೆಯುವ ಸೌಲಭ್ಯಗಳನ್ನು ನೀಡಿ,  ಮುಂದೆ ರೈತರ ದಿನಾಚರಣೆ ಕಾರ್ಯಕ್ರಮವನ್ನು ರೈತರೇ ಏರ್ಪಡಿಸಿ ಕೃಷಿ ಮಾಹಿತಿಯನ್ನು ಹಂಚಿಕೊಳ್ಳಬೇಕೆಂದು ಸೂಚಿಸಿದರು. 

ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಡಿಮೆ ಖರ್ಚಿನಿಂದ ಅಧಿಕ ಲಾಭ ಪಡೆಯುವಂತಹ ಯೋಜನೆಗಳನ್ನು ರೈತರು ಕೈಗೊಳ್ಳಬೇಕು ಎಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ  ತಾಲ್ಲೂಕಿನ ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷ ಶಿವಣ್ಣ ತಿಳಿಸಿದರು.

ಕೃಷಿ  ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ಜಹೀರ್ ಬಾಷಾ ಮಾತನಾಡಿ, ಸಸ್ಯ ಸಂರಕ್ಷಣೆಯ ರಾಸಾಯನಿಕಗಳನ್ನು ತಜ್ಞರ ಸಲಹೆ ಪಡೆದು ಅಗತ್ಯಕ್ಕೆ ತಕ್ಕಂತೆ ಬಳಸಬೇಕೆಂದು ಸಲಹೆ ನೀಡಿದರು. 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶುಭ ಮಾತನಾಡಿ, ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತ ಮಹಿಳೆಯರು ಪೌಷ್ಟಿಕತೆ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚಿಸಿ, ಇಲಾಖೆಯಿಂದ ರೈತ ಮಹಿಳೆಗೆ ಮತ್ತು ಮಕ್ಕಳಿಗೆ ದೊರೆಯುವ ಸೌಲಭ್ಯಗಳನ್ನು ತಿಳಿಸಿದರು.

ಕೃಷಿ ವಿಜ್ಞಾನ ಕೇಂದ್ರದ ತಜ್ಞ ಶಶಿಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣ ಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಬಾಬು, ಪ್ರಗತಿಪರ ರೈತ ವೆಂಕಟರೆಡ್ಡಿ, ಕೃಷಿ ವಿಜ್ಞಾನ ಕೇಂದ್ರ ವಿಷಯ ತಜ್ಞರಾದ ಡಾ. ಗೀತಾ ಎಂಕಂಚಿ, ಡಾ.ಎಂ.ಶಾಲಿನಿ, ಕೆ.ಆರ್.ಅಶೋಕ, ತಾಲ್ಲೂಕಿನ ಕೃಷಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.