ADVERTISEMENT

ನೌಕರರ ವೇತನ ಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 6:25 IST
Last Updated 4 ಫೆಬ್ರುವರಿ 2011, 6:25 IST

ಚಿಂತಾಮಣಿ: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ 6ನೇ ವೇತನ ಆಯೋಗ ರಚಿಸಿ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಮತ್ತು ಇನ್ನಿತರ ರಾಜ್ಯ ಸರ್ಕಾರಗಳು ಈಗಾಗಲೇ 6ನೇ ವೇತನ ಆಯೋಗದ ವರದಿ ಅನುಷ್ಠಾನಗೊಳಿಸಿವೆ. ರಾಜ್ಯ ಸರ್ಕಾರವೂ ಸಹ ಕೂಡಲೇ ವೇತನ ಆಯೋಗ ರಚಿಸಲು ಕ್ರಮ ಕೈಗೊಳ್ಳಬೇಕು. ಪ್ರಾಮಾಣಿಕ ನಿವೃತ್ತ ಐಎಎಸ್ ಅಧಿಕಾರಿಯನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಯೋಗ ವರದಿ ನೀಡುವುದು, ಅನುಷ್ಠಾನಗೊಳಿಸುವುದು ದೀರ್ಘ ಕಾಲ ತೆಗೆದುಕೊಳ್ಳುವುದರಿಂದ ಮಧ್ಯಂತರ ಪರಿಹಾರ ನೌಕರರಿಗೆ ಮಂಜೂರು ಮಾಡಬೇಕು. 5ನೇ ವೇತನ ಆಯೋಗದಲ್ಲಿ ಶಿಕ್ಷಕರಿಗೆ ಆಗಿರುವ ಅನ್ಯಾಯ ಸರಿಪಡಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.

ಸರ್ಕಾರ ಶಿಕ್ಷಕರ ವರ್ಗಾವಣೆ ನೀತಿ ಬದಲಾವಣೆ ಹಾಗೂ ವರ್ಗಾವಣೆ ನಿಯಂತ್ರಣ ಕಾಯ್ದೆಯಿಂದ ಶಿಕ್ಷಕರನ್ನು ಮುಕ್ತಗೊಳಿಸಬೇಕು.  ಸುಗ್ರೀವಾಜ್ಞೆ ಮೂಲಕ  ಸರಿಯಾದ ವರ್ಗಾವಣೆ ನೀತಿ ತರುವಂತೆ ಒತ್ತಾಯಿಸಿದರು.ಅನುದಾನಿತ ಶಾಲೆಗಳ  ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಬೇಕು.  ವೈದ್ಯಕೀಯ ಕಾರ್ಡ್ ಮೂಲಕ ಉಚಿತ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವೆಚ್ಚದ ಮರು ಸಂದಾಯ ಪಡೆಯಲು ಹಲವು ಹಂತಗಳಲ್ಲಿ ಕಿರುಕುಳ ಅನುಭವಿಸಬೇಕಾಗುತ್ತದೆ.  ಈ ದೆಸೆಯಲ್ಲಿ  ವೈದ್ಯಕೀಯ ಸೌಲಭ್ಯ ನೀಡುವಂತೆ ಆಗ್ರಹ ಪಡಿಸಿದರು.

ಶಿಕ್ಷಕರು ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ತರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ ಸ್ಪೂರ್ತಿ ನೀಡಬೇಕು ಹಾಗೂ ಪೋಷಕರಿಗೆ ಅರಿವು ಮೂಡಿಸುವುದು ಮುಂತಾದ ಯೋಜನೆ ಹಮ್ಮಿಕೊಳ್ಳಬೇಕು. ಶಿಕ್ಷಣ ಮಕ್ಕಳಿಗೆ ಬದುಕುವ ಆಸ್ತಿ,  ಮಕ್ಕಳ ಮನೋಸ್ಥಿತಿಯನ್ನು ಅರ್ಥ ಮಾಡಿಕೊಂಡು ವ್ಯವಸ್ಥಿತವಾಗಿ ಯೋಜನೆ  ರೂಪಿಸಿಕೊಳ್ಳಬೇಕು. ಶಿಕ್ಷಕರು ಮೌಲ್ಯವರ್ಧನೆ ಹೆಚ್ಚಿಸಿಕೊಂಡು ಸಮಾಜದ ಅಭಿವೃದ್ಧಿಗೂ ಕಾರಣರಾಗುತ್ತಾರೆ. ಅಧಿಕಾರಿಗಳು ಶಿಕ್ಷಕರೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.