ADVERTISEMENT

ಪಠ್ಯದಲ್ಲಿ ಕೇಸರೀಕರಣ: ಎಸ್‌ಎಫ್‌ಐ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 6:50 IST
Last Updated 23 ಫೆಬ್ರುವರಿ 2012, 6:50 IST

ಚಿಕ್ಕಬಳ್ಳಾಪುರ: ಪ್ರಾಥಮಿಕ ಪಠ್ಯದಲ್ಲಿ ಕೇಸರೀಕರಣ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಎಳೆಯ ಮಕ್ಕಳ ಮನಸ್ಸಿನಲ್ಲಿ ಜಾತಿ ಎಂಬ ವಿಷಬೀಜ ಬಿತ್ತಲು ಹೊರಟಿದೆ ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಉಳ್ಳಿಉಮೇಶ್ ಆಕ್ರೋಶ ವ್ಯಕ್ತ ಪಡಿಸಿದರು.

ನಗರದ ಕೆಇಬಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಎಸ್‌ಎಫ್‌ಐ ಜಿಲ್ಲಾ ಸಂಘಟನಾ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದರು.

`ಶಿಕ್ಷಣದಲ್ಲಿ ಖಾಸಗೀಕರಣ ಮಾಡುವ ಮೂಲಕ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಕನಸಾಗಿದೆ. ರಾಜ್ಯ ಬಿಜೆಪಿ ಸರ್ಕಾರ ಬಂದಾಗಿನಿಂದ ವಿದ್ಯಾರ್ಥಿ ವಿರೋಧಿ ಧೋರಣೆ ಅನು ಸರಿಸುತ್ತಾ ಬರುತ್ತಿದೆ. ಬರುವ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಕೇಂದ್ರ ಸರ್ಕಾರ ಶೇ.10 ರಷ್ಟು ಮತ್ತು ರಾಜ್ಯ ಸರ್ಕಾರ ಶೇ.30 ರಷ್ಟು ಮೀಸಲಿಡುವಂತೆ ಉಮ್ಮೇಶ್ ಆಗ್ರಹಿಸಿದರು.

 ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆ ವಿದ್ಯಾರ್ಥಿ ಸಮುದಾಯವನ್ನು ವೈಜ್ಞಾನಿಕ ತಳಹದಿ ಮೇಲೆ ಸಂಘಟಿಸುತ್ತಿದೆ.  ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಮಾಜವಾದದ ಗುರಿಯೊಂದಿಗೆ ವಿದ್ಯಾರ್ಥಿಗಳ ಸಮಸ್ಯೆ ಗಳ ಪರಿಹಾರಕ್ಕಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಿದೆ. ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿ ಗಳಾದ ವ್ಯಾಪಾರೀಕರಣ ಮತ್ತು ಕೇಸರೀಕರಣದ ನಿಲ್ಲಬೇಕು. ಇದರ ವಿರುದ್ಧ ಹಾಗೂ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯ, ಶುಲ್ಕ ಏರಿಕೆ, ಅಸಮರ್ಪಕ ಸಾರಿಗೆ, ಡೊನೇಷನ್, ಕ್ಯಾಪಿಟೇಶನ್‌ಗಳ ವಿರುದ್ಧ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದರು.

 ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಮುನೀಂದ್ರ, ಎಸ್‌ಎಫ್‌ಐ ಮಾಜಿ ಕೇಂದ್ರ ಸಮಿತಿ ಸದಸ್ಯ ಎಂ.ಸಿ.ಮುನಿವೆಂಕಟಪ್ಪ, ರಾಜ್ಯ ಸಹ ಕಾರ್ಯದರ್ಶಿ ವಿ.ಅಂಬರೀಶ್, ಜಿಲ್ಲಾ ಮುಖಂಡ ಈಶ್ವರ್, ಸಿಐಟಿಯು ಮುಖಂಡ ಡಿ.ಎನ್.ಮುನಿಕೃಷ್ಣಪ್ಪ ಮತ್ತಿತರರು ಸಮಾವೇಶದಲ್ಲಿ ಹಾಜ ರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.