ADVERTISEMENT

ಪರಿಸರ ಶುದ್ಧತೆ ನಮ್ಮೆಲ್ಲರ ಹೊಣೆಗಾರಿಕೆ

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷ ಶಾಸಕ ಡಾ.ಕೆ.ಸುಧಾಕರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಜೂನ್ 2019, 15:49 IST
Last Updated 20 ಜೂನ್ 2019, 15:49 IST
ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಮಾತನಾಡಿದರು.
ಸಭೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ನಗರ ಮಾತ್ರವಲ್ಲ ಗ್ರಾಮೀಣ ಜನರ ಬದುಕು ಕೂಡ ಹಸನಾಗಬೇಕು. ಹೀಗಾಗಿ ಪರಿಸರ ಕಾಪಾಡುವುದು, ನೀರನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಹೊಣೆಗಾರಿಕೆ’ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷ, ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರಿನಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಧಾನ ಕಚೇರಿಯಲ್ಲಿ ಗುರುವಾರ ಅಧಿಕಾರ ವಹಿಸಿಕೊಂಡ ಬಳಿಕ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಎಲ್ಲೆಡೆ ಹಚ್ಚನೆಯ ಹಸಿರು, ಶುದ್ಧ ನೀರಿನ ವಾತಾವರಣ ಎಲ್ಲೆಡೆ ನಿರ್ಮಿಸಲು ಮಂಡಳಿಯ ಅಧಿಕಾರಿಗಳು ಸಂಕಲ್ಪ ಮಾಡಬೇಕು’ ಎಂದು ತಿಳಿಸಿದರು.

‘ಪರಿಸರ ಇಲ್ಲದಿದ್ದರೆ ಮನುಷ್ಯ ಇಲ್ಲ. ಆದರೆ ಇವತ್ತು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಹಾಳು ಮಾಡುವ ಕೆಲಸ ಮಾಡುತ್ತಿದ್ದೇವೆ. ಪರಿಸರ ಎಂದರೆ ಬರೀ ನೀರಲ್ಲ. ಉಸಿರಾಡುವ ಗಾಳಿ ಕೂಡ. ಇವತ್ತು ಗಾಳಿ ಉಸಿರಾಡಲಾರದಷ್ಟು ಕಲುಷಿತವಾಗುತ್ತಿದೆ. ಇವತ್ತು ದೆಹಲಿಯಲ್ಲಿ ವಾಯು ಮಾಲಿನ್ಯದಿಂದ ಜನರು ಶ್ವಾಸಕೋಶ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ’ ಎಂದರು.

‘ಇವತ್ತು ಬೆಂಗಳೂರು ನಗರ ಕೂಡ ಕಡಿವಾಣ ಇಲ್ಲದಂತೆ ಬೃಹತ್ತಾಗಿ ಬೆಳೆಯುತ್ತಿದೆ. ಪರಿಣಾಮ, ಉದ್ಯಾನ ನಗರವಾದ ಬೆಂಗಳೂರಿನಲ್ಲಿ ಇವತ್ತು ಉದ್ಯಾನ ಹೋಗಿ ನಗರ ಮಾತ್ರ ಉಳಿದಿದೆ. ಬೆಂಗಳೂರು ಮತ್ತೊಂದು ದೆಹಲಿ ಆಗಬಾರದು. ಪರಿಸರ ರಕ್ಷಣೆ ವಿಚಾರದಲ್ಲಿ ನಮ್ಮ ಪಾತ್ರ ಏನು ಎಂದು ಅರಿತುಕೊಳ್ಳಬೇಕು. ಈ ಹೊಣೆಗಾರಿಕೆಯನ್ನು ನಾನು ದೃಢಸಂಕಲ್ಪದಿಂದ ತೆಗೆದುಕೊಂಡಿರುವೆ’ ಎಂದು ಹೇಳಿದರು.

‘ನಾನು ಮಂಡಳಿ ಅಧ್ಯಕ್ಷನಾಗುತ್ತೇನೆ ಎಂದುಕೊಂಡಿರಲಿಲ್ಲ. ಅದಕ್ಕೆ ಅಪೇಕ್ಷೆ ಕೂಡ ಪಟ್ಟಿರಲಿಲ್ಲ. ಇದೊಂದು ಸುವರ್ಣ ಅವಕಾಶ ಎಂದು ತಿಳಿದಿರುವೆ. ಮೂರು ವರ್ಷಗಳ ಈ ಅವಕಾಶವನ್ನು ಕರ್ನಾಟಕ ಇತಿಹಾಸದ ಸುವರ್ಣ ಪುಟಗಳಲ್ಲಿ ಬಿಟ್ಟು ಹೋಗಬೇಕು ಎಂಬ ಅಚಲ ನಂಬಿಕೆ ಇಟ್ಟುಕೊಂಡಿರುವೆ. ಅದಕ್ಕಾಗಿ ಆಡಳಿತ ಮಂಡಳಿ ಸದಸ್ಯರು, ಅಧಿಕಾರಿಗಳು ಸೇರಿದಂತೆ ನಾವೆಲ್ಲರೂ ತಂಡವಾಗಿ ಕೆಲಸ ಮಾಡಬೇಕು. ನಮ್ಮೆಲ್ಲರ ಮೇಲೆ ದೊಡ್ಡ ಹೊಣೆಗಾರಿಕೆ ಇದೆ’ ಎಂದು ತಿಳಿಸಿದರು.

‘ಮಂಡಳಿಯ ಇತಿಹಾಸದಲ್ಲಿಯೇ ಇದೇ ಮೊದಲ ರಾಜಕಾರಣಿ, ಶಾಸಕ, ವೈದ್ಯರೊಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಎಲ್ಲ ನಿಯಮಗಳನ್ನು ಅರಿತುಕೊಳ್ಳಲು ಸಮಯಬೇಕು. ಮಂಡಳಿಗೆ ಹೆಚ್ಚು ಸಮಯ ಕೊಡಲು ಪ್ರಯತ್ನಿಸುತ್ತೇನೆ. ಸರ್ಕಾರದ ವತಿಯಿಂದ ಮಾಡಬೇಕಾದ, ನಿಂತಿರುವ ಕಾರ್ಯಕ್ರಮಗಳನ್ನು ಮುಂದುವರಿಸಲು ಬೆನ್ನೆಲುಬಾಗಿ ಇರುವೆ’ ಎಂದರು.

ಸುಧಾಕರ್ ಪತ್ನಿ ಡಾ.ಪ್ರೀತಿ, ಮಂಡಳಿ ಕಾರ್ಯದರ್ಶಿ ಮನೋಜ್ ಕುಮಾರ್, ಆಡಳಿತ ಮಂಡಳಿ ಸದಸ್ಯರು, ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.