ADVERTISEMENT

ಪರೀಕ್ಷೆ ಎದುರಿಸಲು ಆತ್ಮವಿಶ್ವಾಸ ಮುಖ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 6:25 IST
Last Updated 2 ಫೆಬ್ರುವರಿ 2011, 6:25 IST

ಬಾಗೇಪಲ್ಲಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಆತ್ಮವಿಶ್ವಾಸದೊಂದಿಗೆ ಅಧ್ಯಯನ ಮಾಡಿ ಧೈರ್ಯದಿಂದ ಸವಾಲು ಸ್ವೀಕರಿಸಬೇಕು ಎಂದು  ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಕೃಷ್ಣಪ್ಪ ತಿಳಿಸಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಶಾಲಾ ವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಮಂಗಳವಾರ ಎಸ್‌ಎಸ್‌ಎಲ್‌ಸಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಿ ಎಂಬ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಬಹಳ ಕ್ಲಿಷ್ಟವಾದ ಪ್ರಶ್ನೆ ಹಾಗೂ ಲೆಕ್ಕಗಳನ್ನು ಸತತವಾಗಿ ಅಭ್ಯಾಸ ಮಾಡಬೇಕು. ಗಣಿತ ವಿಷಯದಲ್ಲಿ ಲೆಕ್ಕ ಹಾಗೂ ಪ್ರಮೇಯಗಳನ್ನು ಹೆಚ್ಚು ಅಭ್ಯಾಸ ಮಾಡಬೇಕು. ಸತತ ಪರಿಶ್ರಮ ಹಾಗೂ ಅಭ್ಯಾಸ ಹಾಗೂ ಆತ್ಮವಿಶ್ವಾಸದಿಂದ ಉತ್ತಮ ಅಂಕಗಳನ್ನು ಪಡೆಯಬಹುದಾಗಿದೆ. ಯಾವುದೇ ಭಯಭೀತಿಯಿಲ್ಲದೆ ಪರೀಕ್ಷೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ಸವಾಲಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ಪರೀಕ್ಷೆಗೆ ಮುನ್ನ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ನಡೆಸಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕಾರ್ಯಯೋಜನೆ ರೂಪಿಸಿಕೊಳ್ಳುವಂತೆ ಶಿಕ್ಷಕರಿಗೆ ಕಾರ್ಯಯೋಜನೆ ರೂಪಿಸಬೇಕಾಗಿದೆ ಎಂದು ಹೇಳಿದರು.ಶೈಕ್ಷಣಿಕ ಪ್ರಗತಿಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿ,  ಉತ್ತೀರ್ಣರಾಗಲು ಆತ್ಮವಿಶ್ವಾಸ ಮೂಡಿಸುವಂತೆ ಅವರು ಸಲಹೆ ನೀಡಿದರು.

ಬಿಆರ್‌ಸಿ ಸಮನ್ವಾಧಿಕಾರಿ ಎನ್.ವೆಂಕಟೇಶಪ್ಪ, ಸಿಡಿಪಿಓ ಸಿ.ಕೆ ಲಕ್ಷ್ಮೀದೇವಮ್ಮ, ಸರ್ಕಾರಿ ಬಾಲಕಿಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಎಚ್.ಎಸ್.ಚಕ್ರಪಾಣಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಮುಖ್ಯ ಶಿಕ್ಷಕ ಮಹಮೂಬ್ ಸಾಬ್, ಸಂಪನ್ಮೂಲ ವ್ಯಕ್ತಿ ಸತೀಶ್, ಎಸ್‌ಎಸ್‌ಎಲ್‌ಸಿ  ತಾಲ್ಲೂಕು ನೋಡೆಲ್ ಅಧಿಕಾರಿ ಎನ್.ಎಫ್ ಅಮೀರ್, ಶಿಕ್ಷಕಿಯರಾದ ವಿಜಯಲಕ್ಷ್ಮೀ, ಮುನಜ್ಜಾ ಸುಲ್ತಾನ, ರೆಹಮಾನ್ ಸಾಬ್, ಸಿಡಿಪಿಓ ಕಚೇರಿ ಅಧಿಕಾರಿ ಗಂಗಮ್ಮ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.