ADVERTISEMENT

ಪುಟ್ಟ ಗುಡ್ಡದ ಮೇಲೊಂದು ಪುಟಾಣಿ ಶಾಲೆ

ನಮ್ಮ ಕ್ಯಾಂಪಸ್

ರಾಹುಲ ಬೆಳಗಲಿ
Published 18 ಜುಲೈ 2013, 10:44 IST
Last Updated 18 ಜುಲೈ 2013, 10:44 IST

ಶಾಲಾ ಕಟ್ಟಡದಲ್ಲಿ ಒಟ್ಟು ನಾಲ್ಕು ಕೊಠಡಿಗಳಿವೆಯಾದರೂ ಹೆಚ್ಚು ಬಳಕೆಯಾಗುವುದು ಒಂದು ಅಥವಾ ಎರಡು. 1 ರಿಂದ 5ನೇ ತರಗತಿಯವರೆಗೆ ಪಾಠ ಮಾಡಲು ಒಬ್ಬರೇ ಶಿಕ್ಷಕಿ. ಒಟ್ಟಾರೆ ಐದೂ ತರಗತಿಗಳ ಮಕ್ಕಳ ಸಂಖ್ಯೆ 7 ರಿಂದ 8. ಪಕ್ಕದ ಅಂಗನವಾಡಿ ಕೇಂದ್ರದ ಮಕ್ಕಳು ಜೊತೆಗೂಡಿದರೆ ಮಕ್ಕಳ ಸಂಖ್ಯೆಯು ಹತ್ತರ ಗಡಿ ದಾಟುತ್ತದೆ. ಇದೆಲ್ಲಕ್ಕಿಂತ ಅಚ್ಚರಿ ಸಂಗತಿಯೆಂದರೆ ಈ ಶಾಲೆ ಪುಟ್ಟ ಗುಡ್ಡವೊಂದರ ಮೇಲೆ ನಿರ್ಮಿಸಲಾಗಿದೆ. ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಪ್ರತಿ ದಿನ ತರಗತಿಗಳು ನಡೆಯುತ್ತವೆ.

ಇಂತಹ ಭಿನ್ನವಾದ ಶಾಲೆ ನೋಡಬೇಕಿದ್ದರೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊಲಿಮೇನಹಳ್ಳಿಗೆ ಹೋಗಬೇಕು. ಗ್ರಾಮ ಪ್ರವೇಶಿಸಿದೊಡನೆ ಶಾಲೆ ಕಟ್ಟಡ ಕಾಣಿಸುವುದಿಲ್ಲ. ಮಣ್ಣಿನ ರಸ್ತೆಯನ್ನು ದಾಟಿಕೊಂಡು ಗ್ರಾಮದ ಮೂಲೆಯಲ್ಲಿರುವ ಪುಟ್ಟ ಗುಡ್ಡವೊಂದನ್ನು ಏರಿದರೆ ತುದಿಯಲ್ಲಿ ನಿರ್ಮಾಣಗೊಂಡಿರುವ ಶಾಲೆ ಗೋಚರವಾಗುತ್ತದೆ. ಈ ಶಾಲೆ ಇಷ್ಟು ಎತ್ತರದಲ್ಲೇಕೆ ಎಂದು ಕುತೂಹಲದಿಂದ ಕೇಳಿದರೆ, `ಹೇಗಾದರೂ ಮಾಡಿ ಶಾಲೆಯನ್ನು ಉಳಿಸಿಕೊಳ್ಳಬೇಕೆಂದು ಗ್ರಾಮಸ್ಥರೇ ಅರ್ಧ ಬೆಟ್ಟವನ್ನು ಕಡಿದು, ಇಲ್ಲಿ ಶಾಲೆ ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ' ಎಂದು ಗ್ರಾಮದ ನಿವಾಸಿಯೊಬ್ಬರು ಹೇಳುತ್ತಾರೆ.
ಪುಟ್ಟದಾದ ಆವರಣ ಹೊಂದಿರುವ ಶಾಲೆಗೆ ಪ್ರತಿ ದಿನ ಮಕ್ಕಳು ಬರುತ್ತಾರೆ. ಅವರಿಗೆ ಪಾಠ ಮಾಡಲು ಗೌರಿಬಿದನೂರಿನಿಂದ ಶಿಕ್ಷಕಿ ಕೃಷ್ಣವೇಣಿ ಬರುತ್ತಾರೆ.

ಬೆಳಿಗ್ಗೆ 10.30 ರಿಂದ ಸಂಜೆ 4.30ರವರೆಗೆ ನಡೆಯುವ ಈ ಶಾಲೆಯಲ್ಲಿ ಬಿಸಿಯೂಟದ ವ್ಯವಸ್ಥೆಯೂ ಇದೆ. ಕೊಲಿಮೇನಹಳ್ಳಿಯ ಕೆಲ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ತಮ್ಮ ಮಕ್ಕಳನ್ನು ದೂರದಲ್ಲಿರುವ ಪ್ರತಿಷ್ಠಿತ ಮತ್ತು ಖಾಸಗಿ ಶಾಲೆಗಳಲ್ಲಿ ಸೇರಿಸಿದ್ದರೆ, ಕೆಲ ಗ್ರಾಮಸ್ಥರು ತಮ್ಮ ಮಕ್ಕಳು ಇದೇ ಶಾಲೆಯಲ್ಲಿ ಓದಲಿ ಎಂದು ಅಭಿಮಾನದಿಂದ ಇಲ್ಲಿ ಕಳುಹಿಸುತ್ತಾರೆ. ಶಾಲೆ ಅಭಿವೃದ್ಧಿಪಡಿಸುವ ಬಗ್ಗೆ ಅವರು ಪರಸ್ಪರ ಚರ್ಚಿಸುತ್ತಾರೆ.

`ಕಳೆದ ವರ್ಷ ಶಾಲೆಯಲ್ಲಿ ಒಟ್ಟು 12 ಮಕ್ಕಳಿದ್ದರು. ಐದನೇ ತರಗತಿಯಲ್ಲಿ ಉತ್ತೀರ್ಣಗೊಂಡ ಮಕ್ಕಳು ಬೇರೆ ಶಾಲೆಗಳಿಗೆ ಹೋಗಿರುವ ಕಾರಣ ಮಕ್ಕಳ ಸಂಖ್ಯೆ 7 ರಿಂದ 8ಕ್ಕೆ ಇಳಿದಿದೆ. ಆದರೆ ಮಕ್ಕಳು ಪ್ರತಿ ದಿನ ಬರುತ್ತಾರೆ. ನಾನೊಬ್ಬಳೇ ಶಿಕ್ಷಕಿಯಾಗಿದ್ದು, ಐದೂ ತರಗತಿಗೂ ಪಾಠ ಮಾಡುತ್ತೇನೆ. ಅವರಿಗೆ ಉತ್ತಮ ಶಿಕ್ಷಣ ನೀಡಲು ಪ್ರಯತ್ನಿಸುತ್ತೇನೆ. ಮಕ್ಕಳ ಸಂಖ್ಯೆ ಹೆಚ್ಚಿಸಲು ಗ್ರಾಮಸ್ಥರು ಆಸಕ್ತಿ ತೋರುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಆಗಾಗ್ಗೆ ಇಲ್ಲಿ ಭೇಟಿ ನೀಡಿ, ಮಾಹಿತಿ ಪಡೆಯುತ್ತಾರೆ' ಎಂದು ಶಾಲೆ ಶಿಕ್ಷಕಿ ಕೃಷ್ಣವೇಣಿ `ಪ್ರಜಾವಾಣಿ'ಗೆ ತಿಳಿಸಿದರು.

`ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಸೌಲಭ್ಯದ ವಿಷಯದಲ್ಲಿ ಅವರಿಗೇನೂ ಕೊರತೆ ಮಾಡಿಲ್ಲ. ಮಕ್ಕಳಿಗೆ ಶಾಲಾ ಸಮವಸ್ತ್ರ, ನೋಟ್‌ಪುಸ್ತಕಗಳ ಜೊತೆ ಬಿಸಿಯೂಟ ಕೂಡ ನೀಡುತ್ತೇವೆ. ಶಿಕ್ಷಣಕ್ಕೆ ಪೂರಕವಾದ ಎಲ್ಲ ಸಾಮಗ್ರಿ ಶಾಲೆಯಲ್ಲಿವೆ. ಶಾಲೆಯನ್ನು ಮುಚ್ಚದಿರಲು ಮತ್ತು ಬೃಹತ್ ಸ್ವರೂಪದಲ್ಲಿ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಆಸಕ್ತಿ ಹೊಂದಿದ್ದಾರೆ. ಶಿಕ್ಷಣ ಇಲಾಖೆಯಿಂದಲೂ ಪ್ರೋತ್ಸಾಹ ಸಿಗುತ್ತಿದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.