ADVERTISEMENT

ಪುರಾತನ ಶಾಮಣ್ಣ ಕಲ್ಯಾಣಿಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 8:00 IST
Last Updated 29 ಜೂನ್ 2012, 8:00 IST
ಪುರಾತನ ಶಾಮಣ್ಣ ಕಲ್ಯಾಣಿಗೆ ಕಾಯಕಲ್ಪ
ಪುರಾತನ ಶಾಮಣ್ಣ ಕಲ್ಯಾಣಿಗೆ ಕಾಯಕಲ್ಪ   

ಶಿಡ್ಲಘಟ್ಟ: ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಅತ್ಯಂತ ಪುರಾತನ ಕಲ್ಯಾಣಿ ಶಾಮಣ್ಣ ಬಾವಿಗೆ ಕಾಯಕಲ್ಪ ಕಲ್ಪಿಸಲಾಗುತ್ತಿದೆ.

ಸುಮಾರು 400 ವರ್ಷಗಳಷ್ಟು ಹಳೆಯದಾದ ಶಾಮಣ್ಣ ಬಾವಿಯನ್ನು ಕಲ್ಲಿನ ಚಪ್ಪಡಿಗಳಿಂದ ಚತುಷ್ಕೋನಾಕಾರದಲ್ಲಿ ನಿರ್ಮಿಸಲಾಗಿದೆ. ಗೌಡನ ಕೆರೆಯಿಂದ ಹೆಚ್ಚಾದ ನೀರು ಕಲ್ಯಾಣಿಗೆ ಹರಿಯುವಂತೆ ತೂಬನ್ನು ನಿರ್ಮಿಸಲಾಗಿದೆ. ಹಿಂದೆ ಸದಾಕಾಲ ನೀರಿರುತ್ತಿದ್ದ ಶಾಮಣ್ಣ ಬಾವಿಯು ಪಟ್ಟಣದ ಯುವಕರ ಈಜು ಕಲಿಯುವ ತಾಣವಾಗಿತ್ತು. 

 ಆದರೆ ನೀರಿನ ಸಮಸ್ಯೆ ಪ್ರಾರಂಭವಾದಂತೆ ಶಾಮಣ್ಣ ಬಾವಿಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ನಿಲ್ಲುವಂತಾಯಿತು. ಗೌಡನ ಕೆರೆಯಲ್ಲಿ ಕಳೆ ಗಿಡ ತುಂಬಿಕೊಂಡು ಸೂಕ್ತ ನಿರ್ವಹಣೆಯಿಲ್ಲದೆ ತ್ಯಾಜ್ಯ ನೀರು ನಿಲ್ಲುವಂತಾದ ಮೇಲೆ ಅಲ್ಲಿಂದ ಶಾಮಣ್ಣ ಬಾವಿಗೆ ನೀರು ಬರದೆ ಸೊರಗತೊಡಗಿತು. ಕಲ್ಲು ಚಪ್ಪಡಿಗಳ ನಡುವೆ ಕಳೆಗಿಡಗಳು ಬೆಳೆಯತೊಡಗಿದವು. ಕಸ ತ್ಯಾಜ್ಯ ತುಂಬಿಕೊಂಡು ಬಾವಿಯು ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳತೊಡಗಿತು. ಆಗಾಗ ಕೆಲವು ಹಿರಿಯರು ಮತ್ತು ಪುರಸಭೆಯಿಂದ ಶಾಮಣ್ಣ ಬಾವಿಯನ್ನು ಶುಚಿಗೊಳಿಸಿದರೂ, ಕಳೆಗಿಡ ವರ್ಷಕ್ಕೊಮ್ಮೆ ಬೆಳೆದು ಕಲ್ಲುಚಪ್ಪಡಿಗಳನ್ನು ಪಲ್ಲಟಗೊಳಿಸಿದ್ದವು.

ಈಗ ಶಾಮಣ್ಣಬಾವಿ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಪುರಸಭೆಯಿಂದ ರೂ. 2.5 ಲಕ್ಷ ಕಾಮಗಾರಿ ನಡೆಯುತ್ತಿದೆ. ಕಲ್ಲಿನ ಮಧ್ಯೆ ಇದ್ದ ಗಿಡ ಗೆಂಡೆಗಳನ್ನು ಬೇರು ಸಮೇತವಾಗಿ ತೆಗೆದು ಕಲ್ಲುಗಳಿಗೆ ಸಂದು ಗಾರೆ ಮಾಡಲಾಗುತ್ತಿದೆ. ಉಲ್ಲೂರು ಪೇಟೆಯಿಂದ ಹೋಗುವ ವಾಹನಗಳು ಶಾಮಣ್ಣ ಬಾವಿಯ ಬಳಿಗೆ ಹೋಗಿ ಅಪಘಾತವಾಗದಂತೆ 48 ಮೀಟರ್ ಉದ್ದ ಹಾಗೂ ಮೂರುವರೆ ಅಡಿ ಎತ್ತರದ ತಡೆಗೋಡೆ ನಿರ್ಮಾಣ ನಡೆಯುತ್ತಿದೆ.

 `ಅಗ್ರಹಾರ ಬೀದಿಯಲ್ಲಿದ್ದ ಶಾಮಣ್ಣ ಎಂಬುವವರು ಸುಮಾರು 350 ವರ್ಷಕ್ಕೂ ಹಿಂದೆ ಇಲ್ಲಿನ ದೇವಾಲಯದ ಬಳಿ ಕಲ್ಯಾಣಿ ನಿರ್ಮಿಸಿದ್ದರು. ಅದರಿಂದಲೇ ಜನರ ಬಾಯಿಯಲ್ಲಿ ಇದು ಶಾಮಣ್ಣ ಬಾವಿಯೆಂದೇ ಪ್ರಚಲಿತವಾಗಿದೆ. ಇಲ್ಲಿ ಸದಾ ಶುದ್ಧವಾದ ನೀರು ಇರುತ್ತಿತ್ತು. ಒಂದೆಡೆ ವಿಶಾಲ ಅರಳಿಕಟ್ಟೆಯಿದ್ದರೆ ಮತ್ತೊಂದೆಡೆ ದೇವಾಲಯವಿದೆ. ವಿಷ್ಣು ಮತ್ತು ಶಿವ ಒಂದೆಡೆ ಇರುವ ಶ್ರೀಕಂಠೇಶ್ವರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನವಿದೆ. ಇಲ್ಲಿ ಪಾರ್ವತಿ, ಗಣೇಶ, ಸುಬ್ರಮಣ್ಯ, ಆಂಜನೇಯ, ಕೇದಾರೇಶ್ವರ ಮುಂತಾದ ದೇವರುಗಳಿವೆ. ಶಾಮಣ್ಣ ಬಾವಿಯ ಸುತ್ತ ಅರಳಿ ಮರ, ಹುಣಸೆ, ತೆಂಗು, ಹೊಂಗೆ ಮುಂತಾದ ಮರಗಳಿದ್ದು ಅತ್ಯಂತ ಪ್ರಶಾಂತವಾದ ತಾಣವಾಗಿದೆ~ ಎನ್ನುತ್ತಾರೆ ಅಗ್ರಹಾರ ಬೀದಿಯ ನಿವಾಸಿ   ಎಸ್.ವಿ.ನಾಗರಾಜರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.