ADVERTISEMENT

ಪ್ರಗತಿಗೆ ಭ್ರಷ್ಟಾಚಾರ ಅಡ್ಡಿ: ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 8:40 IST
Last Updated 12 ಜುಲೈ 2012, 8:40 IST

ಚಿಕ್ಕಬಳ್ಳಾಪುರ: `ಭ್ರಷ್ಟಾಚಾರದ ವಿರುದ್ಧ ನಾವೇ ಸ್ವಯಂ-ಪ್ರೇರಣೆಯಿಂದ ಕಡಿವಾಣ ಹಾಕದಿದ್ದರೆ, ಭ್ರಷ್ಟತೆಯಿಂದ ಕೂಡಿರುವ ವ್ಯವಸ್ಥೆಯನ್ನು ಕೊನೆಗಾಣಿಸಲು ಆಗುವುದಿಲ್ಲ. ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ತರಲಾಗುವುದಿಲ್ಲ~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, `ನಿಯಂತ್ರಣಕ್ಕೆ ಬಾರದ ಭ್ರಷ್ಟಾಚಾರ ಮಿತಿ ಮೀರಿ ಎಲ್ಲೆಡೆ ವ್ಯಾಪಿಸುತ್ತದೆ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಈಗಲೇ ದನಿಯೆತ್ತದಿದ್ದರೆ, ಮುಂದಿನ ದಿನಗಳಲ್ಲಿ ಇನ್ನೂ ಅಪಾಯಕಾರಿ ಬೆಳವಣಿಗೆಗಳು ಆಗಲಿವೆ~ ಎಂದರು.

`ಸಾವಿರ ಮತ್ತು ಲಕ್ಷ ರೂಪಾಯಿಗಳಿಗೆ ಮಾತ್ರವೇ ಸೀಮಿತವಾಗಿದ್ದ ಭ್ರಷ್ಟಾಚಾರ ಈಗ ಲಕ್ಷಾಂತರ ಕೋಟಿ ರೂಪಾಯಿಗಳಿಗೆ ಮುಟ್ಟಿದೆ. ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೇ ರಾಜ್ಯಮಟ್ಟದಲ್ಲೂ ಒಂದಿಲ್ಲೊಂದು ಹಗರಣಗಳು ಬೆಳಕಿಗೆ ಬರುತ್ತಿದ್ದು, ಭ್ರಷ್ಟ ವ್ಯವಸ್ಥೆಗೆ ಕೈಗನ್ನಡಿಗಳಾಗಿವೆ. ಭ್ರಷ್ಟಾಚಾರದ ಆರೋಪ ಹೊತ್ತವರಿಗೆ ಜೈಲು ಶಿಕ್ಷೆಯಾಗುತ್ತಿಲ್ಲ.

ಅವರ ವಿರುದ್ಧ ಕಠಿಣ ಕ್ರಮವನ್ನು ಸಹ ತೆಗೆದುಕೊಳ್ಳಲಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಜನಸಾಮಾನ್ಯರು ಮತ್ತು ಬಡವರು ಜೀವನ ನಡೆಸುವುದು ದುಸ್ತರವಾಗುತ್ತದೆ~ ಎಂದು ಅವರು ತಿಳಿಸಿದರು.

`ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ಯಾವುದೇ ಕಾರಣಕ್ಕೂ ಲಂಚ ನೀಡುವುದಿಲ್ಲ ಮತ್ತು ಪಡೆಯುವುದಿಲ್ಲವೆಂದು ಎಲ್ಲರೂ ಪ್ರತಿಜ್ಞೆ ಮಾಡಬೇಕು. ವ್ಯವಸ್ಥೆಯಲ್ಲಿನ ಲೋಪದೋಷ ಸರಿಪಡಿಸುವ ಪ್ರಯತ್ನ ನಿರಂತರವಾಗಿ ಮುಂದುವರಿಯಬೇಕು~ ಎಂದು ಅವರು ತಿಳಿಸಿದರು. ಸ್ವಾತಂತ್ರ್ಯ ಹೋರಾಟಗಾರ ಡಿ.ಮಾರಪ್ಪ, `ಭ್ರಷ್ಟಾಚಾರ ವಿರುದ್ಧ ಭಾರತ~ ಸಂಘಟನೆಯ  ಪೃಥ್ವಿ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

`ಹೆಚ್ಚಿನ ನಿರೀಕ್ಷೆ ಮಾಡುವಂತಿಲ್ಲ~

`ಜಗದೀಶ ಶೆಟ್ಟರ್ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ಒಂದೇ ಶಾಲೆಯ ವಿದ್ಯಾರ್ಥಿಗಳು. ಜಗದೀಶ ಶೆಟ್ಟರ್ ಅವರು ನೂತನ ಮುಖ್ಯಮಂತ್ರಿಯಾಗುವುದರಿಂದ ಹೆಚ್ಚಿನ ನಿರೀ ಕ್ಷೆಯನ್ನು ಮಾಡಲಾಗುವುದಿಲ್ಲ. ಸದ್ಯದ ಪರಿಸ್ಥಿ ತಿಯಲ್ಲಿ ಹೆಚ್ಚಿನ ಸುಧಾರಣೆ ಆಗುವುದೆಂದು ನನಗೇನೂ ಅನ್ನಿಸುವುದಿಲ್ಲ~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದರು.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, `ಭ್ರಷ್ಟಾಚಾರ ಕೊನೆಗಾಣಿಸುವತ್ತ ಸರ್ಕಾರ ಶ್ರಮಿಸಬೇಕು. ಲೋಕಾಯುಕ್ತ ನ್ಯಾಯಮೂರ್ತಿ ನೇಮಕಾತಿ ಪ್ರಕ್ರಿಯೆಗೆ ಅನಗತ್ಯ ವಿಳಂಬ ತೋರುವ ಬದಲು ತಕ್ಷಣವೇ ಕಾರ್ಯಪ್ರವೃತ್ತರಾಗಬೇಕು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.