ADVERTISEMENT

ಬದುಕು ಕಟ್ಟಿಕೊಟ್ಟ ಸೊಪ್ಪು

ಟಿ.ನಂಜುಂಡಪ್ಪ
Published 2 ಅಕ್ಟೋಬರ್ 2017, 6:16 IST
Last Updated 2 ಅಕ್ಟೋಬರ್ 2017, 6:16 IST
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದ ಸೊಪ್ಪು ವ್ಯಾಪಾರಿ ಅಶ್ವತ್ಥಪ್ಪ ಸಬ್ಬಾಕ್ಷಿ ಸೊಪ್ಪು ಬೆಳೆದಿರುವುದು
ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದ ಸೊಪ್ಪು ವ್ಯಾಪಾರಿ ಅಶ್ವತ್ಥಪ್ಪ ಸಬ್ಬಾಕ್ಷಿ ಸೊಪ್ಪು ಬೆಳೆದಿರುವುದು   

ಗೌರಿಬಿದನೂರು: ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಸೊಪ್ಪು ಬೆಳೆದು ಮಾರಾಟ ಮಾಡುವುದರ ಮೂಲಕ ಅನೇಕ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಸೊಪ್ಪಿನ ವ್ಯಾಪಾರಕ್ಕಾಗಿಯೇ ಊರು ಖ್ಯಾತಿ ಗಳಿಸಿದೆ.

ತಾಲ್ಲೂಕಿನ ಬೇರೆ ಕಡೆಗಳಲ್ಲಿ ಲಭ್ಯವಿರುವ ಅಲ್ಪಸ್ವಲ್ಪ ನೀರಿನಲ್ಲಿ ತರಕಾರಿ, ಹೂ, ಇತರೆ ಬೆಳೆಗಳು ಬೆಳೆಯುವರು. ಆದರೆ ಇಲ್ಲಿಯ ರೈತರು ಸೊಪ್ಪು ಬೆಳೆದು, ಮಾರಾಟ ಮಾಡುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಹಲವರು ಇದನ್ನೇ ಬದುಕಿನ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.

ಸುಮಾರು 40 ವರ್ಷಗಳ ಹಿಂದೆ ಸೈಕಲ್ ಮತ್ತು ದ್ವಿಚಕ್ರ ವಾಹನ ಇಲ್ಲದ ಸಮಯದಲ್ಲಿ ಸೊಪ್ಪನ್ನು ಚೀಲದಲ್ಲಿ ತುಂಬಿಸಿಕೊಂಡು ತಲೆ ಮೇಲೆ ಹೊತ್ತು ಊರೂರು ತಿರುಗಿ ಮಾರಾಟ ಮಾಡುತ್ತಿದ್ದರು. ಆಗ ಹಣಕ್ಕೆ ಬದಲಾಗಿ ಜೋಳ, ರಾಗಿ ಪಡೆದು ಸೊಪ್ಪು ಮಾರುತ್ತಿದ್ದರು. ನೀರಿನ ಸೌಲಭ್ಯವಿಲ್ಲದವರು ಗ್ರಾಮದ ತೆರೆದ ಬಾವಿ, ಕೆರೆ, ಕುಂಟೆಗಳಿಂದ ನೀರು ಹಾಕಿ ಸೊಪ್ಪನ್ನು ಬೆಳೆಸುತ್ತಿದ್ದರು.

ADVERTISEMENT

ಕಡಿಮೆ ನೀರಿನಲ್ಲಿ ಪಾಲಕ್, ದಂಟಿನ ಸೊಪ್ಪು, ಮೆಂತೆ, ಸಬ್ಬಾಕ್ಷಿ, ಶಕಮಂತೆ, ಕೊಯ್ಯುವ ಸೊಪ್ಪು, ಬಸಳೆ ಸೊಪ್ಪು, ಪುಂಡಿ ಸೊಪ್ಪು ಬೆಳೆಯುವರು.ಮಡಿ ನಿರ್ಮಿಸಿದ ಅದರಲ್ಲಿ ಸೊಪ್ಪು ಬೆಳೆಯುವರು. ಬಿತ್ತಿದ ತಿಂಗಳಲ್ಲಿ ಸೊಪ್ಪು ಕೊಯ್ಲಿಗೆ ಬರುವುದು. ಕಡಿಮೆ ಖರ್ಚಿನಲ್ಲಿ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಬೆಳೆ ಸಿಗುತ್ತದೆ. ಹದವಾಗಿ ಮೂರು ಬಾರಿ ನೀರುಣಿಸಿದರೆ ಸಾಕು. ನೀರಿನ ಲಭ್ಯತೆಯ ಅನುಗುಣವಾಗಿ ಅರ್ಧ ಎಕರೆ ಭೂಮಿಯಲ್ಲಿ ವರ್ಷ ಪೂರ್ತಿ ಸೊಪ್ಪು ಬೆಳೆಯುವರು.

ಸೊಪ್ಪಿನ ಕಂತೆಗೆ ₹ 15ರಿಂದ 20ಕ್ಕೆ ಗ್ರಾಮಗಳಲ್ಲಿ ಹಾಗೂ ಸಂತೆಗಳಲ್ಲಿ ಮಾರಾಟ ಮಾಡುವರು. ತೂಕದ ಲೆಕ್ಕದಲ್ಲಿ 1 ಕೆ.ಜಿ ಸೊಪ್ಪು ₹ 100ರಿಂದ 150ಕ್ಕೆ ಮಾರಾಟವಾಗುತ್ತದೆ. ಬೆಳೆದ ಸೊಪ್ಪು ಗೌರಿಬಿದನೂರು, ತುಮಕೂರು, ಪಾವಗಡ, ಕೊರಟಗೆರೆ, ಮಡಕ, ಶಿರಾ, ಹಿಂದೂಪುರ, ದೊಡ್ಡಬಳ್ಳಾಪುರ ಮತ್ತಿತರ ಕಡೆಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸೊಪ್ಪಿನ ಬೆಲೆ ಹೆಚ್ಚಾದಾಗ ರೈತರು ಲಕ್ಷಗಟ್ಟಲೆ ಆದಾಯ ಗಳಿಸಿದ ಉದಾಹರಣೆಗಳೂ ಇಲ್ಲಿವೆ ಎಂದು ಗ್ರಾಮದ ಹಿರಿಯ ವೆಂಕಟೇಶಪ್ಪ ಹೇಳುವರು.

ಆಹಾರದಲ್ಲಿ ಸೊಪ್ಪು ಬಳಸುವುದು ಅತ್ಯವಶ್ಯ. ಸೊಪ್ಪಿನಲ್ಲಿ ನಾರಿನಾಂಶ ಹೆಚ್ಚಾಗಿರುವುದು. ಕಬ್ಬಿಣಾಂಶ, ಕ್ಯಾಲ್ಸಿಯಂ, ವಿಟಮಿನ್‘ ಎ‘ ಯತೇಚ್ಛವಾಗಿ ಸಿಗುತ್ತದೆ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಎಂದು ಜೀವವಿಜ್ಞಾನ ಉಪನ್ಯಾಸಕ ಟಿ.ಜಯರಾಮ್ ತಿಳಿಸಿದರು.

ಇತರೆ ಬೆಳೆಗಳಿಗಿಂತ ಸೊಪ್ಪನ್ನು ಕಡಿಮೆ ನೀರು ಹಾಗೂ ಕಡಿಮೆ ಖಚ್ಚಿನಲ್ಲಿ ಬೆಳೆಯಬಹುದು. ಹಬ್ಬ ಹರಿದಿನಗಳಲ್ಲಿ ಸೊಪ್ಪಿಗೆ ಸ್ವಲ್ಪ ಬೇಡಿಕೆ ಕಡಿಮೆ. ಉಳಿದಂತೆ ಎಲ್ಲ ದಿನಗಳಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ. ಪಟ್ಟಣಗಳಲ್ಲಿ ಸೊಪ್ಪಿಗೆ ಭಾರಿ ಬೇಡಿಕೆ ಇದೆ. ರೈತರು ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಸೊಪ್ಪು ತೆಗೆದುಕೊಂಡು ಹೋಗಿ ಅಕ್ಕ ಪಕ್ಕದ ಗ್ರಾಮದಲ್ಲಿ ಒಂದು ಗಂಟೆಯಲ್ಲಿ ಮಾರಾಟ ಮಾಡಿ ವಾಪಸ್‌ ಬರುವರು. ಉಳಿದ ಸಮಯದಲ್ಲಿ ಬೆಳೆ ನಿರ್ವಹಣೆ ಕೆಲಸ ಮಾಡುವರು.

ಸೊಪ್ಪು ಬೆಳೆಯುವ ಮತ್ತು ಮಾರಾಟ ಮಾಡುವ ಕಾಯಕ ಸಂಪ್ರದಾಯ ಮಾತ್ರವಲ್ಲ, ಗ್ರಾಮದ ಜನರಿಗೆ ಭವಿಷ್ಯವನ್ನೂ ಕಟ್ಟಿಕೊಟ್ಟಿದೆ. ಕುಟುಂಬಗಳ ನಿರ್ವಹಣೆ ಸೊಪ್ಪಿನಿಂದಲೇ ನಡೆಯುತ್ತಿದೆ. ಇದನ್ನು ಬಿಟ್ಟರೆ ನಮಗೆ ಬೇರೆ ಕೆಲಸ ಗೊತ್ತಿಲ್ಲ. ಇದೇ ನಮ್ಮ ಬಾಳಿನ ದೇವರು ಇದ್ದಂತೆ’ ಎನ್ನುತ್ತಾರೆ ಗ್ರಾಮದ ರೈತ ಅಶ್ವತ್ಥಪ್ಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.