ADVERTISEMENT

ಬರಪೀಡಿತ ಘೋಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 9:25 IST
Last Updated 15 ಸೆಪ್ಟೆಂಬರ್ 2011, 9:25 IST

ಚಿಕ್ಕಬಳ್ಳಾಪುರ: ಸಕಾಲಕ್ಕೆ ಮಳೆ ಯಾಗದೇ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಕುಟುಂಬ ಗಳನ್ನು ನಿರ್ವಹಿಸಲಾಗದ ಸ್ಥಿತಿ ಯಲ್ಲಿದ್ದಾರೆ. ರೈತರ ದುಃಸ್ಥಿತಿಯನ್ನು ಕಂಡು ಸರ್ಕಾರ ಎರಡೂ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸ ಬೇಕು ಎಂದು ರೈತ ಮುಖಂಡ ಯಲುವ ಹಳ್ಳಿ ಎನ್.ರಮೇಶ್ ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಅವರಿಗೆ ಮನವಿಪತ್ರ ಸಲ್ಲಿಸುವ ಮೂಲಕ ಮುಖ್ಯಮಂತ್ರಿಯವರಿಗೆ ಕೋರಿರುವ ಅವರು, `ಮಳೆಯಾಶ್ರಿತ ಬೆಳೆಗಳಾದ ರಾಗಿ, ಜೋಳ, ಅವರೇ, ತೊಗರಿ, ಕಡಲೇಕಾಯಿ ಬೆಳೆಗಾಗಿ ಬಿತ್ತನೆ ಮಾಡಿದ ರೈತರು ಈಗ ಕಂಗಾಲಾಗಿದ್ದಾರೆ.
 
ಮಳೆಯಿಲ್ಲದೇ ಮತ್ತು ಸರ್ಕಾರದ ನೆರವು ಸಿಗದೇ ರೈತರು ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ಎರಡೂ ಜಿಲ್ಲೆಗಳನ್ನು ಬರಪೀಡಿತ ಪ್ರದೇಶ ಗಳನ್ನಾಗಿ ಘೋಷಿಸಬೇಕು~ ಎಂದು ಅವರು ಮನವಿ ಮಾಡಿದ್ದಾರೆ.

ಬರಪೀಡಿತ ಜಿಲ್ಲೆಗಳು ಎಂದು ಘೋಷಿಸುವುದರ ಜೊತೆಗೆ ವಿಶೇಷ ಆದ್ಯತೆ ಮೇಲೆ ಗೋಶಾಲೆ ಮತ್ತು ಗಂಜಿ ಕೇಂದ್ರಗಳನ್ನು ಆರಂಭಿಸಬೇಕು. ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನಕ್ಕಾಗಿ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರೈತ ಮುಖಂಡರಾದ ಯಲುವಹಳ್ಳಿ ಎನ್.ರಮೇಶ್, ಪುರದಗಡ್ಡೆ ಕೃಷ್ಣಪ್ಪ, ಗಿಡ್ನಹಳ್ಳಿ ಗೋಪಾಲರೆಡ್ಡಿ, ಕೊಂಡೇನಹಳ್ಳಿ ಚಂದ್ರಪ್ಪ, ಮಂಚನಬಲೆ ಶ್ರಿಧರ್, ತಮ್ಮನಾಯಕನಹಳ್ಳಿ ಜಗದೀಶ್, ಅಣಕನೂರು ಮಣಿ, ನಂದಿ ತಾಲ್ಲೂಕು ಪಂಚಾಯಿತಿ ಸದಸ್ಯ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.