ADVERTISEMENT

ಬರ ಪರಿಸ್ಥಿತಿ ನಿರ್ವಹಣೆ ರಾಜ್ಯ ಸರ್ಕಾರ ವಿಫಲ: ಪರಮೇಶ್ವರ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2012, 7:00 IST
Last Updated 12 ಏಪ್ರಿಲ್ 2012, 7:00 IST

ಚಿಕ್ಕಬಳ್ಳಾಪುರ: ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಕೇಂದ್ರ ಸರ್ಕಾರದಿಂದ ದೊರೆಯುತ್ತಿರುವ ಅನುದಾನ ವನ್ನು ರಾಜ್ಯ ಸರ್ಕಾರ ಸದ್ಬಳಕೆ ಮಾಡುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಆರೋಪಿಸಿದರು.

ಬರ ಪರಿಸ್ಥಿತಿ ವೀಕ್ಷಣೆಗಾಗಿ ಬುಧವಾರ ನಗರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತ ನಾಡಿ, `ರಾಜ್ಯದಲ್ಲಿ ಬರ ಪರಿಸ್ಥಿತಿ ಉದ್ಭವಿಸಿ ಆರು ತಿಂಗಳುಗಳೇ ಕಳೆದರೂ ಸರ್ಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬರಪೀಡಿತ ತಾಲ್ಲೂಕಿನ ಸಮಸ್ಯೆಗಳನ್ನು ನಿವಾರಿಸುವತ್ತ ಅಗತ್ಯ ಕ್ರಮ ತೆಗೆದುಕೊಳ್ಳುತ್ತಿಲ್ಲ~ ಎಂದು ಆರೋಪಿಸಿದರು.

`ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಆಗಾಗ್ಗೆ ಅನುದಾನ ಬಿಡುಗಡೆ ಮಾಡುತ್ತಲಿದೆ.  ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದಲೂ ಕೋಟ್ಯಂತರ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ನೀಡಿದೆ. ಕೇಂದ್ರ ಸರ್ಕಾರವು ಆಗಿಂದಾಗ್ಗೆ ಸಕಲ ನೆರವನ್ನು ನೀಡುತ್ತಿದ್ದರೂ ರಾಜ್ಯ ಸರ್ಕಾರ ಮಾತ್ರ ಒಂದಿಲ್ಲೊಂದು ಆರೋಪಗಳನ್ನು ಮಾಡುತ್ತ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಲೇ ಇದೆ~ ಎಂದು ಅವರು ಆರೋಪಿಸಿದರು.

`ಬರ ಪರಿಸ್ಥಿತಿ ತೀವ್ರಗೊಳ್ಳುತ್ತಿದೆ ಮತ್ತು ಗ್ರಾಮೀಣ ಪ್ರದೇಶದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.  ವಿಧಾನಮಂಡಲ ಅಧಿವೇಶನದಲ್ಲೂ ಪ್ರತಿಭಟನೆ ನಡೆಸಿ, ಸರ್ಕಾರ ಕಾರ್ಯ ನಿರ್ವಹಣೆಯ ಬಗ್ಗೆ ಕಟುವಾಗಿ ಟೀಕಿಸಲಾಗಿದೆ. ಹೀಗಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಳ್ಳದೇ ತನ್ನದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದಿಲ್ಲೊಂದು ನೆಪಗಳನ್ನು ಹೇಳುತ್ತ ರಾಜ್ಯ ಸರ್ಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ~ ಎಂದರು.

`ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವ ಪಕ್ಷ ಸಭೆಯನ್ನು ಕರೆಯಬೇಕಿತ್ತು. ಎಲ್ಲ ಪಕ್ಷಗಳಿಂದ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ಪಡೆಯಬೇಕಿತ್ತು. ಎಲ್ಲ ಪಕ್ಷದ ಮುಖಂಡರು ಒಳಗೊಂಡ ನಿಯೋಗವೊಂದನ್ನು ನವದೆಹಲಿಗೆ ಕರೆದೊಯ್ದು ಪ್ರಧಾನಿ ಮನಮೋಹನ ಸಿಂಗ್ ಅವರನ್ನು ಭೇಟಿ ಮಾಡಿಸಬೇಕಿತ್ತು ಎಂದು ಒತ್ತಿ ಹೇಳಿದರು.

`ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ತೀವ್ರ ಸ್ವರೂಪದಲ್ಲಿದ್ದು.  ಇದರ ಬಗ್ಗೆಯಾದರೂ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು~ ಎಂದು ಅವರು ಪರಮೇಶ್ವರ ಆಗ್ರಹಿಸಿದರು.

ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡಿ, `ಬರ ಪರಿಸ್ಥಿತಿ ಅಧ್ಯಯನ ಮಾಡಲೆಂದೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೋಟಮ್ಮ ಮತ್ತು  ಡಾ.ಜಿ.ಪರಮೇಶ್ವರ ಅವರ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ರಾಜ್ಯದ ಎಲ್ಲ ಬರಪೀಡಿತ ಪ್ರದೇಶಗಳಿಗೆ ಅವರು ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ವರದಿ ಸಿದ್ಧಪಡಿಸುತ್ತಾರೆ. ಆ ವರದಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಲಾಗುವುದು~ ಎಂದು ವಿವರಿಸಿದರು.

ಶಾಸಕರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರ್ ರೆಡ್ಡಿ, ಕೆಪಿಸಿಸಿ ಸದಸ್ಯರಾದ ಗೋವಿಂದ ರಾಜು, ನಫೀಜ್ ಫಾತಿಮಾ, ಡಾ.ಕೆ.ಸುಧಾಕರ, ಕೆ.ವಿ.ನವೀನ್ ಕಿರಣ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆಂಜನಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.