ADVERTISEMENT

ಬಸ್ ಸೌಲಭ್ಯಕ್ಕೆ ಮಂಡಿಕಲ್ ಗ್ರಾಮಸ್ಥರ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 9:36 IST
Last Updated 10 ಡಿಸೆಂಬರ್ 2013, 9:36 IST

ಗುಡಿಬಂಡೆ: ಇಲ್ಲಿಗೆ ಸಮೀಪದ ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ ಗ್ರಾಮಕ್ಕೆ ಸಮರ್ಪಕ ಬಸ್‌ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸ್ಥಳೀಯರು ಸೋಮವಾರ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಸಕಾಲದಲ್ಲಿ ಬಸ್‌ ಸೌಕರ್ಯ ಇಲ್ಲದೆ ಜನರು ಸಮಸ್ಯೆ ಎದುರಿಸ­ಬೇಕಾಗಿದೆ. ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಘೋಷಣೆ ಕೂಗಿದರು.

ಬೆಂಗಳೂರಿನಿಂದ ಆವುಲಬೆಟ್ಟಕ್ಕೆ ಬಸ್ ಮಾರ್ಗ ಮುಂದುವರಿಸಬೇಕು. ಚಿಕ್ಕಬಳ್ಳಾಪುರದ ಬಸ್‌ಗಳನ್ನು ಮಂಡಿ­ಕಲ್ ಮಾರ್ಗವಾಗಿ ಸಂಚರಿಸು­ವಂತೆ ಕ್ರಮ ಕೈಗೊಳ್ಳಬೇಕು. ಮಂಡಿಕಲ್ ಬಸ್ ನಿಲ್ದಾಣದಲ್ಲಿ  ನೀರಿನ ಸೌಲಭ್ಯ ಮತ್ತು ಕಾವಲುಗಾರರನ್ನು ನೇಮಿಸುವಂತೆ ಆಗ್ರಹಿಸಿದರು.  ಐದಾರು ಬಸ್‌ಗಳು ಗ್ರಾಮ­ದಲ್ಲಿಯೇ ವಾಸ್ತವ್ಯ ಹೂಡು­ವಂತೆ ಮಾಡ­ಬೇಕು.

ಇದರಿಂದ ಬೆಳಿಗ್ಗೆ ಗ್ರಾಮ­ದಿಂದ ಬೇರೆ ಕಡೆ ಪ್ರಯಾಣ ಬೆಳೆಸಲು ಅನುಕೂಲ­ವಾಗುತ್ತದೆ. ಜೊತೆಗೆ ವಿದ್ಯಾರ್ಥಿ­ಗಳಿಗೂ ಕೂಡಾ ಶಾಲೆ, ಕಾಲೇಜಿಗೆ ಸಕಾಲದಲ್ಲಿ ಹೋಗಿ ಬರಲು ಸಾಧ್ಯವಾಗುತ್ತದೆ ಎಂದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಘಟಕದ ವ್ಯವಸ್ಥಾಪಕ ಗಿರೀಶ್‌, ಸಿಬಂದಿ ಕೃಷ್ಣಪ್ರಸಾದ್, ಶ್ರೀನಿವಾಸ­ನಾಯ್ಡು ಎರಡು ದಿನಗಳ ಒಳಗಾಗಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಮಂಡಿಕಲ್ ಗ್ರಾ.ಪಂ.ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ಉಮೇರ್‌ ಬಾನು,  ಸದಸ್ಯರಾದ ಎಂ.ರಾಮಕೃಷ್ಣ, ಎಸ್.­ರಾಮ­­ಕೃಷ್ಣಪ್ಪ, ಬೈರಾರೆಡ್ಡಿ, ಗ್ರಾಮದ ಹಿರಿಯ ಮುಖಂಡ ವೆಂಕಟರೆಡ್ಡಿ ವಿದ್ಯಾರ್ಥಿಗಳು, ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಇಂದು ಹೃದ್ರೋಗ ತಪಾಸಣೆ ಶಿಬಿರ
ಶಿಡ್ಲಘಟ್ಟ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವಾಜಪೇಯಿ ‘ಆರೋಗ್ಯಶ್ರೀ ಯೋಜನೆ’ಯಡಿ ಮಂಗಳ­ವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಉಚಿತವಾಗಿ ಹೃದ್ರೋಗ ತಪಾಸಣಾ ಶಿಬಿರ ಆಯೋಜಿಸಲಾಗಿದೆ.  

ಬೆಂಗಳೂರಿನಲ್ಲಿ ನಡೆಯುವ ಶಸ್ತ್ರ ಚಿಕಿತ್ಸೆ ವೇಳೆ ಔಷಧಿ, ಊಟ, ಪ್ರಯಾಣ ಭತ್ಯೆ ಸರ್ಕಾರ ಭರಿಸುತ್ತದೆ. 
ಶಿಬಿರದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದ ತಜ್ಞರು ತಪಾಸಣೆ ನಡೆಸಲಿದ್ದಾರೆ.

ಬಿಪಿಎಲ್‌, ಅಕ್ಷಯ, ಅನಿಲ ರಹಿತ, ಅಂತ್ಯೋದಯ ಕಾರ್ಡ್‌ದಾರರು ಸದುಪಯೋಗಪಡಿ­ಸಿಕೊಳ್ಳುವಂತೆ ತಾಲ್ಲೂಕು ಆರೋಗ್ಯಾ­ಧಿಕಾರಿ ಪ್ರಕ­ಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.