ADVERTISEMENT

ಬಾಗೇಪಲ್ಲಿಯಲ್ಲಿ ಕೆರೆಯಂತಾದ ಕ್ರೀಡಾಂಗಣ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:21 IST
Last Updated 5 ಸೆಪ್ಟೆಂಬರ್ 2013, 8:21 IST

ಬಾಗೇಪಲ್ಲಿ: ಪಟ್ಟಣದಲ್ಲಿ ಮಂಗಳವಾರ ರಾತ್ರಿ ಬಿದ್ದ ಮಳೆಯಿಂದ ಕ್ರೀಡಾಂಗಣದಲ್ಲಿ ನೀರು ಶೇಖರಣೆಯಾಗಿ, ಬುಧವಾರ ನಿಗದಿಯಾಗಿದ್ದ ಪಿಯುಸಿ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ತೊಂದರೆಯಾಯಿತು.

ಪಟ್ಟಣದ ಅಂಬೇಡ್ಕರ್ ವಿದ್ಯಾರ್ಥಿನಿಲಯದ ಬಳಿ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಿದ್ದು, ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಮುಖ್ಯದ್ವಾರದ ಗೇಟು ಮುರಿದಿದೆ. ಪೆವಿಲಿಯನ್ ಕುಸಿಯುವ ಹಂತದಲ್ಲಿದೆ. ಟ್ರ್ಯಾಕ್‌ಗಳು ಉತ್ತಮ ಸ್ಥಿತಿಯಲಿಲ್ಲ. ಅಲ್ಲಲ್ಲಿ ಕಲ್ಲು ಗುಂಡುಗಳು ಉಳಿದಿದ್ದು, ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಮಂಗಳವಾರ ರಾತ್ರಿ ಬಿದ್ದ ಮಳೆಯಿಂದ ಕ್ರೀಡಾಂಗಣ ಕೆರೆ ರೂಪ ಪಡೆದಿತ್ತು. ಬುಧವಾರ ಕ್ರೀಡಾಕೂಟ ನಡೆಯಬೇಕಿದ್ದ ಇಲ್ಲಿ ಮಕ್ಕಳು ನೀರಿಗಿಳಿದು ಆಟ ಆಡಿದರು. ಒಂದೆಡೆ ಪೂರ್ವನಿಗದಿಯಂತೆ ಆಟೋಟ ನಡೆಸಲು ದೈಹಿಕ ಶಿಕ್ಷಣ ಶಿಕ್ಷಕರು ಹರಸಾಹಸ ಪಟ್ಟರೆ, ಮತ್ತೊಂದೆಡೆ ಕಬಡ್ಡಿ, ಕೊಕ್ಕೋ, ವಾಲಿಬಾಲ್ ಆಡಬೇಕಿದ್ದ ಕ್ರೀಡಾಪಟುಗಳು ಕೆಸರಿಗೆ ಇಳಿಯುವುದು ಹೇಗೆ ಎಂದು ಯೋಚಿಸುತ್ತಿದ್ದುದು ಕಂಡು ಬಂತು.

ಕ್ರೀಡೆಗಳಲ್ಲಿ ಗೆಲ್ಲಲು ಕೆಲವರು ಹುಮ್ಮಸ್ಸಿನಿಂದ ಓಡಿದರೆ, ಜಾರಿ ಬೀಳುವ ಭಯದಿಂದ ಮತ್ತೆ ಕೆಲವರು ಸ್ಪರ್ಧೆಯಿಂದಲೇ ದೂರ ಉಳಿದರು.

`ಪಟ್ಟಣದ ಮಿನಿ ಕ್ರೀಡಾಂಗಣ ಕಳೆದ 30 ವರ್ಷಗಳಿಂದ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿದೆ. ಇದೀಗ ಟ್ರ್ಯಾಕ್‌ಗಳು ಸಿದ್ಧವಾಗಿವೆ. ಕಬಡ್ಡಿ, ಕೊಕ್ಕೋ, ವಾಲಿಬಾಲ್, ಥ್ರೋಬಾಲ್ ಅಂಕಣಗಳ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಕಲ್ಲು-ಬಂಡೆಗಳನ್ನು ತೆರವುಗೊಳಿಸಬೇಕು. ಯುವಜನ ಹಾಗೂ ಕ್ರೀಡಾ ಇಲಾಖೆ ಇತ್ತ ಗಮನ ಹರಿಸಿ ಕ್ರೀಡಾಂಗಣದ ಗುಣಮಟ್ಟ ಮೇಲ್ದರ್ಜೆಗೆ ಏರಿಸಬೇಕು' ಎಂದು ದೈಹಿಕ ಶಿಕ್ಷಣ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಕ್ರೀಡಾಂಗಣವೇನೋ ಇದೆ. ಆದರೆ ಮೂಲಸೌಲಭ್ಯ ಇಲ್ಲ. ಕ್ರೀಡಾಪಟುಗಳಿಗೆ ಅಭ್ಯಾಸ ಸಾಧ್ಯವಾಗುತ್ತಿಲ್ಲ. ಅಂಕಣಗಳು ಸಮರ್ಪಕವಾಗಿಲ್ಲ. ಮಣ್ಣು ಕುಸಿದಿದೆ. ಓಡುವುದಿರಲಿ ಇಲ್ಲಿ ನಡೆದಾಡಲು ಸಹ ಆಗುತ್ತಿಲ್ಲ ' ಎಂದು ಕ್ರೀಡಾಪಟು ವೆಂಕಟಾದ್ರಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.