ಬಾಗೇಪಲ್ಲಿ: ತಾಲ್ಲೂಕಿನ ಮಿಟ್ಟೇಮರಿ, ವರದಯ್ಯಗಾರಿಪಲ್ಲಿ, ಬುಟ್ಟಿವಾರಿಪಲ್ಲಿ, ಕಾನಗಮಾಕಲಪಲ್ಲಿ ಮೊದಲಾದ ಗ್ರಾಮಗಳು ಈಗ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಎದುರಿಸುತ್ತಿವೆ. ಸ್ವಚ್ಛತೆ ಕೊರತೆ ಜತೆಗೆ ಗ್ರಾಮ ಪಂಚಾಯಿತಿ, ಆರೋಗ್ಯ ಇಲಾಖೆಯು ಇತ್ತ ಗಮನ ಹರಿಸದೇ ಇರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ಚರಂಡಿಯಲ್ಲಿ ನಿಂತ ನೀರಿನಿಂದ ಡೆಂಗೆ, ಮಲೇರಿಯಾ, ಚಿಕುನ್‌ಗುನ್ಯಾ ಅಂಥ ಮಾರಣಾಂತಿಕ ರೋಗಗಳು ಹರಡುವ ಮುನ್ನ ಗ್ರಾಮ ಪಂಚಾಯಿತಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರೂ ಕ್ಯಾರೆ ಎನ್ನುವವರಿಲ್ಲ.
ತಾಲ್ಲೂಕಿನ 24 ಗ್ರಾಮ ಪಂಚಾಯಿತಿಗಳ ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆಯಾಗುವ ಅಗತ್ಯವಿದೆ. ಕೆಲವೆಡೆ ಇದ್ದರೂ ಕಸ ವಿಲೇವಾರಿ ಆಗದಿರುವುದರಿಂದ ನೀರು ನಿಲ್ಲುತ್ತದೆ.
ಜನರಲ್ಲಿ ಆರೋಗ್ಯ, ಸ್ವಚ್ಛತೆ ತಿಳಿವಳಿಕೆ ಕೊರತೆಯಿಂದ ರೋಗಗಳು ಹರಡುವ ಸಂಭವವಿದೆ ಎನ್ನುವುದು ವೈದ್ಯರ ಅನಿಸಿಕೆ. ಇದಕ್ಕೆ ಉದಾಹರಣೆ ಎಂಬಂತೆ ಕುಡಿಯುವ ನೀರಿನ ಟ್ಯಾಂಕ್ ಸಮೀಪದಲ್ಲಿಯೇ ಬಟ್ಟೆ, ಪಾತ್ರೆಗಳನ್ನು ಮಹಿಳೆಯರು ತೊಳೆಯುತ್ತಾರೆ. ರೋಗಗಳ ಕಾರಣ ಕುರಿತು ತಿಳಿವಳಿಕೆ ನೀಡಬೇಕು ಎನ್ನುವುದು ಸ್ಥಳೀಯ ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ.
ಮುಂಜಾಗ್ರತೆ ಕ್ರಮವಾಗಿ ಸದ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಾಬುರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಆರ್.ಶ್ರೀಕಾಂತ್, ಆರೋಗ್ಯಾಧಿಕಾರಿ ಮುರಳಿ ಅವರ ನೇತೃತ್ವದಲ್ಲಿ ಜಾಗೃತಿ ನಡೆಯುತ್ತಿದೆ. ಇದರ ಜತೆಯಲ್ಲಿ ಆಶಾ ಕಾರ್ಯಕರ್ತೆಯರು ಕೈಜೋಡಿಸಿದ್ದಾರೆ.
ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದಲ್ಲಿ ಅಂತರ್ಜಲ, ಸ್ವಚ್ಛತೆ ಕುರಿತು ಕೆಲಸಗಳನ್ನು ಹಾಕಿಕೊಳ್ಳಬಹುದು ಎಂದು ಅಭಿಪ್ರಾಯ ಪಡುತ್ತಾರೆ ಪರಿಸರವಾದಿಗಳು.
`ಇಡೀ ರಾತ್ರಿ ಸೊಳ್ಳೆಗಳ ಕಾಟದಿಂದ ನಿದ್ರೆ ಬರೋದಿಲ್ಲ ಸಾಹೇಬ್ರೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಬೇಕು. ಕನಿಷ್ಠ ಕುಡಿಯುವ ನೀರು, ರಸ್ತೆಗಳು ನಿರ್ಮಿಸಬೇಕಾಗಿದೆ' ಎಂದು ಕಾನಗಮಾಕಲಪಲ್ಲಿ ಗ್ರಾಮಸ್ಥ ಶ್ರೀನಿವಾಸ್ `ಪ್ರಜಾವಾಣಿ'ಗೆ ತಿಳಿಸಿದರು.
`ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಆದೇಶ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಿರೀಕ್ಷಿಸಿದಷ್ಟು ಸ್ವಚ್ಛತಾ ಕಾರ್ಯಗಳು ನಡೆದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಸಭೆಗಳನ್ನು ಹಮ್ಮಿಕೊಳ್ಳಲಾಗುವುದು' ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಬಾಬುರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.