ಬಾಗೇಪಲ್ಲಿ: ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದ್ದು, ಮಕ್ಕಳಿಗೆ ಸಮರ್ಪಕವಾದ ಶಿಕ್ಷಣ ದೊರೆಯುತ್ತಿಲ್ಲ ಎಂದು ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸುತ್ತಲಿನ ತಾಲ್ಲೂಕುಗಳಿಗೆ ಶಿಕ್ಷಕರು ವರ್ಗವಾಗಿದ್ದು, 200ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಶಿಕ್ಷಕರ ಕೊರತೆ ಮತ್ತು ಇನ್ನಿತರ ಸಮಸ್ಯೆಯಿಂದ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿವೆ.
ತಾಲ್ಲೂಕಿನಲ್ಲಿ 244 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 73 ಹಿರಿಯ ಪ್ರಾಥಮಿಕ ಶಾಲೆ ಮತ್ತು 20 ಸರ್ಕಾರಿ ಪ್ರೌಢಶಾಲೆಗಳಿದ್ದು, ಪ್ರಾಥಮಿಕ ಶಾಲೆಗಳಲ್ಲಿ 856 ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಇದರ ನಡುವೆ ಕೆಲವು ಶಿಕ್ಷಕರ ವರ್ಗವಾಗಿದ್ದು, 215 ಹುದ್ದೆಗಳು ಖಾಲಿಯಿವೆ. ಹುದ್ದೆಗಳು ಭರ್ತಿಯಾಗದ ಕಾರಣ ದೈನಂದಿನ ಪಾಠ ಪ್ರವಚನಕ್ಕೆ ಅಡಚಣೆಯಾಗಿದೆ.
`ರಾಜ್ಯದ ಹಿಂದುಳಿದ ತಾಲ್ಲೂಕುಗಳಲ್ಲಿ ಒಂದಾಗಿರುವ ಬಾಗೇಪಲ್ಲಿಯಲ್ಲಿ ಶಿಕ್ಷಕರೇ ಇಲ್ಲದ ಎರಡು ಕಿರಿಯ ಪ್ರಾಥಮಿಕ ಶಾಲೆಗಳಿವೆ.ಏಕೋಪಾಧ್ಯಾಯದ 101 ಕಿರಿಯ ಪ್ರಾಥಮಿಕ ಶಾಲೆಗಳಿವೆ. ಒಬ್ಬರೇ ಶಿಕ್ಷಕ ಇರುವ 1 ಹಿರಿಯ ಪ್ರಾಥಮಿಕ ಶಾಲೆ, ಇಬ್ಬರು ಶಿಕ್ಷಕರು ಇರುವ 7 ಹಿರಿಯ ಪ್ರಾಥಮಿಕ ಶಾಲೆಗಳು. ಮೂವರು ಶಿಕ್ಷಕರು ಇರುವ ಏಳು ಹಿರಿಯ ಪ್ರಾಥಮಿಕ ಶಾಲೆಗಳಿವೆ~ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
`ಪ್ರೌಢಶಾಲೆ ವಿಭಾಗದಲ್ಲಿ 6 ಮುಖ್ಯ ಶಿಕ್ಷಕರ ಹುದ್ದೆ, 7 ಇಂಗ್ಲಿಷ್ ಶಿಕ್ಷಕರು, 5 ಕಲಾ ಶಿಕ್ಷಕರು, 6 ಸಿಬಿಜೆಡ್ ಶಿಕ್ಷಕರ ಹುದ್ದೆ, 2 ಪಿಸಿಎಂ ಶಿಕ್ಷಕರು ಮತ್ತು 2 ಹಿಂದಿ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಪ್ರಾಥಮಿಕ ಶಿಕ್ಷಣ ವಿಭಾಗದಲ್ಲಿ 215 ಹುದ್ದೆಗಳು ಮತ್ತು ಪ್ರೌಢಶಾಲಾ ವಿಭಾಗದಲ್ಲಿ 60 ಹುದ್ದೆಗಳು ಖಾಲಿಯಿವೆ.
ಇದರ ಪರಿಣಾಮ ವಿದ್ಯಾರ್ಥಿಗಳು ಖಾಸಗಿ ಶಾಲೆಗೆ ಸೇರುತ್ತಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಕೊರತೆಯಿಂದ ಶಾಲೆಗಳನ್ನು ವಿಲೀನಗೊಳಿಸುವ ಕ್ರಮಕ್ಕೆ ಆದ್ಯತೆ ನೀಡಲಾಗುತ್ತದೆ~ ಎನ್ನುತ್ತಾರೆ.
`ಶಿಕ್ಷಕರ ಕೊರತೆಯಿಂದ ತಾಲ್ಲೂಕಿನಲ್ಲಿ ಶೈಕ್ಷಣಿಕ ಬರಗಾಲ ಆವರಿಸಿದೆ. ಶೈಕ್ಷಣಿಕ ಪ್ರಗತಿ ಸುಧಾರಣೆಗೆ ತಾತ್ಕಾಲಿಕ ಹೊರಗುತ್ತಿಗೆ ಆಧಾರದಲ್ಲಿಯಾದರೂ ಶಿಕ್ಷಕರ ನೇಮಕಾತಿಯಾಗಬೇಕು.
ಶಾಲೆನಡೆಸಲು ವ್ಯವಸ್ಥೆ ಆಗಬೇಕು. ನಂತರ ಶಾಶ್ವತ ಪರಿಹಾರ ರೂಪಿಸಬೇಕು.
ಶಿಕ್ಷಕರು ಇಲ್ಲದ ಶಾಲೆಗಳಲ್ಲಿ ಫಲಿತಾಂಶ ನಿರೀಕ್ಷಿಸಲು ಆಗುವುದಿಲ್ಲ. ತಾಲ್ಲೂಕಿಗೆ ಶಿಕ್ಷಕರ ನೇಮಕವಾಗಬೇಕು~ ಎಂದು ಶಾಲಾ ಪೋಷಕ ಮಲ್ಲಸಂದ್ರ ಶ್ರೀನಿವಾಸ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.