ADVERTISEMENT

ಭೋಗ ನಂದೀಶ್ವರ ಜಾತ್ರೆಗೆ ಜನ ಸಾಗರ

ದಕ್ಷಿಣ ಕಾಶಿಯಲ್ಲಿ ಜಾತ್ರೆ ಸಡಗರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2014, 7:06 IST
Last Updated 28 ಫೆಬ್ರುವರಿ 2014, 7:06 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಯ ಭೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದ ಭಕ್ತರು
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಯ ಭೋಗನಂದೀಶ್ವರಸ್ವಾಮಿ ದೇವಾಲಯದಲ್ಲಿ ಶುಕ್ರವಾರ ದೇವರ ದರ್ಶನಕ್ಕಾಗಿ ಸಾಲುಗಟ್ಟಿ ನಿಂತಿದ್ದ ಭಕ್ತರು   

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಜಾತ್ರೆಯು ರಾಜ್ಯದಲ್ಲೇ ಪ್ರಸಿದ್ಧವಾಗಿದ್ದು, ಶುಕ್ರವಾರ ನಡೆಯುವ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿವೆ.

ಗುರುವಾರ ಶಿವರಾತ್ರಿಯ ಪ್ರಯುಕ್ತ ನಂದಿಯ ಭೋಗ ನಂದೀಶ್ವರ, ಅರುಣಾಚಲೇಶ್ವರ ದೇವರುಗಳಿಗೆ ನಡೆದ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದರು.

ಜಾತ್ರೆಯ ವೇಳೆ ಯಾವುದೇ ಅವಘಡ ಸಂಭವಿಸದಂತೆ ತಡೆಯಲು ದೇಗುಲ ಪ್ರಾಂಗಣದಲ್ಲಿರುವ ಕಲ್ಯಾಣಿ ಶೃಂಗಿತೀರ್ಥದ ಸುತ್ತ ಅಡತಡೆಗಳನ್ನು ನಿರ್ಮಿಸಲಾಗಿದೆ. ಅಂಗಡಿ ಸಾಲು ನಿರ್ಮಿಸಿರುವ ವ್ಯಾಪಾರಿಗಳು ಬತ್ತಾಸು, ಬುರುಗು, ಸಿಹಿ, ಖಾರ ಇತರ ತಿನಿಸುಗಳನ್ನು ಅಂದವಾಗಿ ಜೋಡಿಸಿಡುವ ಕಾರ್ಯ ಆರಂಭಿಸಿದ್ದಾರೆ.

ಇನ್ನೊಂದೆಡೆ ಕಲ್ಲಿನ ಚಕ್ರಗಳ ಬೃಹತ್‌ ರಥವನ್ನು ಚಂದಗೊಳಿಸುವ ಕೆಲಸವೂ ಸಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ ಮತ್ತು ಭಕ್ತರಿಗೆ ಪ್ರಸಾದ ಸೇರಿದಂತೆ ಇತರ ಸೌಲಭ್ಯಗಳನ್ನು ಕಲ್ಪಿಸುವ ಕಾರ್ಯ ಆರಂಭವಾಗಿದೆ.

ದನಗಳ ಜಾತ್ರೆ ನಿಷೇಧಿಸಿರುವುದರಿಂದ ಹಾಗೂ ಬಂದಿದ್ದ ದನಗಳಿಗೆ ಕಾಲು ಬಾಯಿ ಜ್ವರದ ಲಸಿಕೆ ಹಾಕಿಸಿ ವಾಪಸ್‌ ಕಳಿಸಿರುವ ಕಾರಣ ವ್ಯಾಪಾರ ವಹಿವಾಟು ಹಾಗೂ ಜನರು ಕಡಿಮೆಯಾಗಬಹುದೆಂಬ ಭಯ ವ್ಯಾಪಾರಿಗಳಲ್ಲಿದೆ. ಆದರೆ ಶಿವರಾತ್ರಿಯಂದು ಕಂಡು ಬಂದ ಜನರಿಂದ ಶುಕ್ರವಾರ ಜನರ ಸಂಖ್ಯೆ ಮತ್ತಷ್ಟು ಹೆಚ್ಚುವ ಆಶಾ ಭಾವನೆ ಅಂಗಡಿಗಳನ್ನು ಹಾಕಿಕೊಂಡವರದ್ದಾಗಿತ್ತು. 

ಭೋಗನಂದೀಶ್ವರಸ್ವಾಮಿ ಬ್ರಹ್ಮರಥೋತ್ಸವಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಚಾಲನೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.