ADVERTISEMENT

ಮಕ್ಕಳ ವಿಜ್ಞಾನ ಪ್ರತಿಭಾ ಪ್ರದರ್ಶನ ಅನಾವರಣ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:10 IST
Last Updated 13 ಡಿಸೆಂಬರ್ 2013, 9:10 IST

ಚಿಕ್ಕಬಳ್ಳಾಪುರ: ನಗರದ ಜೂನಿಯರ್ ಕಾಲೇಜು ಬಳಿಯಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗುರುವಾರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿ­ಗಳಿಗೆ ಮತ್ತು ವಿಜ್ಞಾನ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಮಕ್ಕಳು ಸಂಭ್ರಮ­ದಿಂದ ಪಾಲ್ಗೊಂಡರು. ತಮ್ಮ ಶಕ್ತಿ, ಪ್ರತಿಭೆ, ಸಾಮರ್ಥ್ಯಕ್ಕೆ ಅನುಸಾರ­ವಾಗಿ ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಿದ ವಿದ್ಯಾರ್ಥಿಗಳು ಅವುಗಳ ವಿವರಣೆ ನೀಡಿದರು.

ವಿದ್ಯುತ್ ಪೂರೈಕೆ ದುರ್ಬಳಕೆ­ಯಾಗು­ವುದನ್ನು ತಡೆಗಟ್ಟುವುದು ಹೇಗೆ? ಪರಿಸರ ಮಾಲಿನ್ಯ ನಿಯಂತ್ರಿಸು­ವುದು ಹೇಗೆ? ಸೌರ ವಿದ್ಯುತ್‌ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಬಗೆಬಗೆಯ ಆಕರ್ಷಕ ಮಾದರಿಗಳನ್ನು ಪ್ರದರ್ಶಿಸಿದರು.

ವಿಜ್ಞಾನ ಮಾದರಿಗಳನ್ನು ಪ್ರದರ್ಶಿ­ಸುವ ಮಕ್ಕಳಿಗೆ ಯಾವುದೇ ರೀತಿಯ ಗೊಂದಲ ಮತ್ತು ತೊಂದರೆಯಾಗ­ದಿರಲೆಯೆಂದೇ ಎಲ್ಲ ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೋಣೆಯಲ್ಲಿ ಸ್ಥಳಾವಕಾಶ ಕಲ್ಪಿಸ­ಲಾಗಿತ್ತು. ಒಂದೊಂದು ಕೋಣೆಯಲ್ಲಿ ಇಬ್ಬರು ಅಥವಾ ಮೂವರು ಮಾತ್ರವೇ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿ­ದರು. ವಿಜ್ಞಾನ ಮಾದರಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ತೀರ್ಪು­ಗಾರರಿಗೆ ಮತ್ತು ಶಿಕ್ಷಕರಿಗೆ ವಿಜ್ಞಾನ ಮಾದರಿಗಳ ವಿವರಣೆ ನೀಡಿದರು.

‘ವಿಜ್ಞಾನ, ಗಣಿತ ವಿಷಯದಲ್ಲಿ ಮಕ್ಕಳಿಗೆ ಜಾಗೃತಿ ಮೂಡಲಿ. ಅವುಗಳ ಅರಿವು ಬೆಳೆಸಿಕೊಳ್ಳಲಿ ಎಂಬ ಉದ್ದೇಶ­ದಿಂದ ಪ್ರತಿ ವರ್ಷ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸುತ್ತೇವೆ. ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸಲೆಂದೇ ಮಕ್ಕಳಿಗೆ ಕೃಷಿ, ಶಕ್ತಿ, ಆರೋಗ್ಯ, ಪರಿಸರ, ಸಂಪನ್ಮೂಲ ಮತ್ತು ಇತರ ಕ್ಷೇತ್ರಗಳ ವಿಷಯಗಳನ್ನು ನೀಡಿರುತ್ತೇವೆ. ಆಯಾ ವಿಷಯಗಳ ಆಧಾರದ ಮೇಲೆಯೇ  ವಿಜ್ಞಾನ ಮಾದರಿಗಳನ್ನು ಸಿದ್ಧಪಡಿಸುತ್ತಾರೆ.

ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳೇ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾಮಟ್ಟದಲ್ಲಿ ವಿಜೇತರಾದವರನ್ನು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ‘ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್‌)ಉಪನ್ಯಾಸಕಿ ಎನ್‌.ಕೆ.ಲಕ್ಷ್ಮಮ್ಮ ತಿಳಿಸಿದರು.

ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆದ ವಿಜ್ಞಾನ ವಸ್ತು ಪ್ರದರ್ಶನದ ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಯಟ್‌ ಪ್ರಾಂಶುಪಾಲ ಟಿ.ಎಲ್.­ಶಾರದಮ್ಮ, ಹಿರಿಯ ಪ್ರಾಧ್ಯಾಪಕರಾದ ಟಿ.ಅಶ್ವತ್ಥರೆಡ್ಡಿ, ಎಂ.ವೆಂಕಟೇಶ್‌, ನಾರಪ್ಪರೆಡ್ಡಿ, ಸುಕನ್ಯಾ, ತೀರ್ಪುಗಾರರಾದ ಶ್ರೀನಿವಾಸ್‌, ರಖೀಬ್‌, ಸುರೇಶ್‌, ಚನ್ನಕೃಷ್ಣಪ್ಪ, ಸತೀಶ್‌, ಎಚ್‌.ಆರ್.ನಾಗೇಂದ್ರಪ್ಪ, ಅರುಣ ಉಪಸ್ಥಿತರಿದ್ದರು.

ವಿಜ್ಞಾನ ವಸ್ತು ಪ್ರದರ್ಶನದ ಫಲಿತಾಂಶ
ವಿಜ್ಞಾನ ವಸ್ತು ಪ್ರದರ್ಶನದ ಒಟ್ಟು ಆರು ವಿಭಾಗಗಳಾದ ಕೃಷಿ, ಶಕ್ತಿ, ಆರೋಗ್ಯ, ಪರಿಸರ, ಸಂಪನ್ಮೂಲ ಮತ್ತು ಇತರ ಕ್ಷೇತ್ರಗಳಲ್ಲಿ ವಿಜೇತರು ಆಯ್ಕೆಯಾದರು. ಒಂದೊಂದು ವಿಭಾಗದಲ್ಲೂ ವಿದ್ಯಾರ್ಥಿಗಳು ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.

ಕೃಷಿ: ಮುದ್ದೇನಹಳ್ಳಿಯ ಸತ್ಯಸಾಯಿ ಸೇವಾ ಪ್ರೌಢಶಾಲೆಯ ನಿರಂಜನ್ ಮತ್ತು ನಿತೀಶ್‌ಕುಮಾರ್‌–ಪ್ರಥಮ, ಶಿಡ್ಲಘಟ್ಟ ನಾಯಕನಹಳ್ಳಿಯ ನವೋದಯ ಪ್ರೌಢಶಾಲೆಯ ಎನ್‌.ರಶ್ಮಿ ಮತ್ತು ಜಿ.ಕವನಾ–ದ್ವಿತೀಯ,
ಗುಡಿಬಂಡೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಜಿ.ಎನ್‌.ಕೀರ್ತಿ ಮತ್ತು ಎಸ್‌.ಸುದೀಕ್ಷಾ–ತೃತೀಯ.

ಶಕ್ತಿ; ಶಿಡ್ಲಘಟ್ಟ ಮಳ್ಳೂರು ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಜಿ.ಕೆ.ಮೋನಿಷಾ ಮತ್ತು ತೇಜಸ್‌–ಪ್ರಥಮ, ಚಿಂತಾಮಣಿ ವಾಣಿ ವಿದ್ಯಾಲಯದ ಆಸ್ಮಾ ಸುಲ್ತಾನ್‌ ಮತ್ತು ಶಬ್ರೀಜ್‌ ಖಾನ್‌–ದ್ವಿತೀಯ,
ಚಿಕ್ಕಬಳ್ಳಾಪುರದ ಪಿಪಿಎಚ್‌ಎಸ್‌ ಶಾಲೆಯ ಮಹಮ್ಮದ್‌ ತೌಸೀಫ್‌ ಮತ್ತು ಇಸ್ಮಾಯಿಲ್‌ ಜಬಿಉಲ್ಲಾ–ತೃತೀಯ.
ಆರೋಗ್ಯ: ಮಂಡಿಕಲ್ಲು ಸರ್ಕಾರಿ ಬಾಲಕಿಯರ ಶಾಲೆಯ ಎಸ್.ಕೆ.ಧಾರಿಣಿ ಮತ್ತು ನೇತ್ರಾವತಿ–ಪ್ರಥಮ,
ಕುರೂಡಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಚೈತ್ರಾ ಮತ್ತು ಕೆ.ಎಸ್‌.ನಳಿನಾ–ದ್ವಿತೀಯ, ಮುದ್ದೇನಹಳ್ಳಿ ಸತ್ಯಸಾಯಿ ಪ್ರೌಢಶಾಲೆಯ ಶಶಿಕಲಾ ಮತ್ತು ವೈ.ಎ.ಶ್ವೇತಾ–ತೃತೀಯ.

ಪರಿಸರ: ಚಿಂತಾಮಣಿ ಪ್ರಗತಿ ಸಂಯುಕ್ತ ಪ್ರೌಢಶಾಲೆಯ ರಕ್ಷಿತ್‌ ಮತ್ತು ಪೃಥ್ವಿರಾಜ್‌–ಪ್ರಥಮ,
ಬಾಗೇಪಲ್ಲಿ ಜೂಲಪಾಳ್ಯ ಪೋಲೇರಮ್ಮ ಸಂಯುಕ್ತ ಶಾಲೆಯ ಪಿ.ಎಂ.ಗಾಯತ್ರಿ ಮತ್ತು ಪಿ.ಎಂ.ಅರುಣ್‌–ದ್ವಿತೀಯ. ಮುದ್ದೇನಹಳ್ಳಿ ಸತ್ಯಸಾಯಿ ಪ್ರೌಢಶಾಲೆಯ ನಿತಿನ್‌ ಮಾನಸ್‌ ಮತ್ತು ಚನ್ನಕೇಶವ–ತೃತೀಯ.

ಸಂಪನ್ಮೂಲ: ಗುಡಿಬಂಡೆ ಹಂಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿನೋದ್‌ಕುಮಾರ್‌ ಮತ್ತು ತುಳಸಿ–ಪ್ರಥಮ, ಚಿಂತಾಮಣಿ ಶ್ರೀವಾಣಿ ಕಾನ್ವೆಂಟ್‌ ಶಾಲೆಯ ಅಖಿಲ್‌ಬಾಬು ಮತ್ತು ಸುಮ್ರೀನ್‌ ತಾಜ್‌–ದ್ವಿತೀಯ. ಬಾಗೇಪಲ್ಲಿ ಪ್ರಗತಿ ವಿದ್ಯಾಸಂಸ್ಥೆಯ ಪವನ್‌ ಮತ್ತು ಸುಪ್ರೀತಿ–ತೃತೀಯ.

ಇತರೆ ಕ್ಷೇತ್ರಗಳಾದ ವಿಜ್ಞಾನ ಮತ್ತು ಗಣಿತ ಅನ್ವೇಷಣೆ: ಬಾಗೇಪಲ್ಲಿ ಜೂಲಪಾಳ್ಯ ಪೋಲೇರಮ್ಮ      ಸಂಯುಕ್ತ ಶಾಲೆಯ ಪಿ.ಎಂ.ಗಾಯತ್ರಿ ಮತ್ತು ಪಿ.ಎಂ.ಅರುಣ್‌–ಪ್ರಥಮ,
ಚಿಂತಾಮಣಿ ವಾಣಿ ಇಂಗ್ಲಿಷ್‌ ಕಾನ್ವೆಂಟ್‌ ಶಾಲೆಯ ಕೀರ್ತಿರೆಡ್ಡಿ ಮತ್ತು ರೆಡ್ಡಿಪ್ರಿಯಾ–ದ್ವಿತೀಯ,
ಶಿಡ್ಲಘಟ್ಟ ನವೋದಯ ಎಚ್.ಕೆ.ಅರುಣ್‌ ಮತ್ತು ಎಂ.ರಮ್ಯಾ–ತೃತೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT