ADVERTISEMENT

ಮತದಾನ ಜಾಗೃತಿಗಾಗಿ ರಂಗೋಲಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 4 ಮೇ 2018, 8:22 IST
Last Updated 4 ಮೇ 2018, 8:22 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ರಂಗೋಲಿ ಬಿಡುವಲ್ಲಿ ನಿರತರಾದ ಮಹಿಳೆಯರು
ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ರಂಗೋಲಿ ಬಿಡುವಲ್ಲಿ ನಿರತರಾದ ಮಹಿಳೆಯರು   

ಚಿಕ್ಕಬಳ್ಳಾಪುರ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಗುರುವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲೆಯ ವಿವಿಧ ಮಹಿಳಾ ಸ್ವ-ಸಹಾಯ ಸದಸ್ಯರು ಹಾಗೂ ಸಾರ್ವಜನಿಕರಿಗಾಗಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ನೂರಾರು ಜನ ಮಹಿಳೆಯರು ಉತ್ಸಾಹದಿಂದ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಣ್ಣ-ಬಣ್ಣದ ಆಕರ್ಷಕ ವಾದ ಹಾಗೂ ಮತದಾನದ ಸಂದೇಶ ಸಾರುವ ರಂಗೋಲಿಗಳನ್ನು ಬಿಡಿಸಿ ಸಂಭ್ರಮಿ ಸಿದರು. ರಂಗೋಲಿಗಳನ್ನು ವೀಕ್ಷಿಸಲು ಜಿಲ್ಲಾಡಳಿತ ಭವನದ ಕಚೇರಿಗಳ ಮಹಿಳಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್ ನಾಗೇಶ್, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತ್ಯಂತ ಶ್ರೇಷ್ಠವಾದದ್ದು. ಮತದಾರರು ತಮ್ಮ ಮತವನ್ನು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನೈತಿಕವಾಗಿ ಯೋಗ್ಯರಿಗೆ ಚಲಾಯಿಸಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಆ ಮೂಲಕ ಜನ ಸ್ನೇಹಿ ಸರ್ಕಾರ ರಚನೆಯಾಗಲು ಎಲ್ಲರೂ ಬದ್ಧತೆ ಮೆರೆಯಬೇಕು’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವಣ್ಣರೆಡ್ಡಿ, ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯರಾದ ಎನ್. ಮುನಿರಾಜು, ರವಿಕುಮಾರ್ ಮತ್ತು ಸತೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಮಹಮದ್ ಉಸ್ಮಾನ್, ತೇಜಸ್ವಿನಿ ಸಂಕಣ್ಣನವರ್, ಶೋಭಾ, ನವತಾಜ್, ಲಕ್ಷ್ಮೀದೇವಮ್ಮ ಉಪಸ್ಥಿತರಿದ್ದರು.

ಪ್ರತಿಜ್ಞಾವಿಧಿ ಬೋಧನೆ

ಶಿಡ್ಲಘಟ್ಟ: ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸಲು, ನೈತಿಕ ಮತ್ತು ಕಡ್ಡಾಯ ಮತದಾನಕ್ಕೆ ಎಲ್ಲರೂ ಸಹಕರಿಸಬೇಕು. ದೇಶದ ಅಭಿವೃದ್ಧಿಗೆ ಕಯತಜೋಡಿಸಬೇಕು ಎಂದು ತಾಲ್ಲೂಕು ಚುನಾವಣಾಧಿಕಾರಿ ಮಲ್ಲಿಕಾರ್ಜುನ್ ತಿಳಿಸಿದರು.

ನಗರದಲ್ಲಿ ನಗರಸಭೆಯ ಬಳಿ ಗುರುವಾರ ಜಿಲ್ಲಾ ಸ್ವೀಪ್‌ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಮತದಾನದ ಅರಿವಿಗಾಗಿ ತಾಲ್ಲೂಕು ಮಟ್ಟದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮತದಾರರು ಕಡ್ಡಾಯವಾಗಿ ತಪ್ಪದೇ ಮತದಾನ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನ ಪ್ರಮಾಣಕ್ಕಿಂತ ಈ ಬಾರಿ ಹೆಚ್ಚಾಗಬೇಕು. ನಿಮ್ಮ ಮತ ನಿಮ್ಮ ಹಕ್ಕು ತಪ್ಪದೇ ನಿಮ್ಮ ಮತ ಚಲಾಯಿಸಿ, ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಎಂದು ತಿಳಿಸುತ್ತಿದ್ದೇವೆ.

ಮತದಾನ ಜನರ ಅಭಿಪ್ರಾಯ ಕ್ಕೊಂದು ಅಮೂಲ್ಯ ಅವಕಾಶವಾಗಿದೆ. ಪ್ರತಿಯೊಬ್ಬ ಅರ್ಹರು ಮತದಾನ ಮಾಡಬೇಕು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಚುನಾವಣೆ ಸಹಕಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ಬಂದು ಉತ್ತಮ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸಹಾಯಕ ಚುನಾವಣಾಧಿಕಾರಿ ಅಜಿತ್‌ ಕುಮಾರ್ ರೈ, ಚುನಾವಣಾ ಶಾಖೆಯ ಸಂಪರ್ಕಾಧಿಕಾರಿ ಶ್ರೀನಾಥ್‌ಗೌಡ, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ಸಿಡಿಪಿಒ ಅಧಿಕಾರಿ ಲಕ್ಷ್ಮೀದೇವಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಚಂದ್ರಶೇಖರಬಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.