ADVERTISEMENT

ಮತ್ತೆ ಗುರುಭವನ ನಿರ್ಮಾಣ ವಿವಾದ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 5:45 IST
Last Updated 1 ಆಗಸ್ಟ್ 2012, 5:45 IST

ಚಿಕ್ಕಬಳ್ಳಾಪುರ: ಕೆಲ ತಿಂಗಳಿನಿಂದ ತಣ್ಣಗಿದ್ದ ಗುರುಭವನ ನಿರ್ಮಾಣ ವಿವಾದ ಈಗ ಮತ್ತೆ ಜೀವ ಪಡೆದುಕೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಗರದ ಬಿ.ಬಿ.ರಸ್ತೆ ಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ್ಲ್ಲಲೇ ಜಿಲ್ಲಾ ಗುರುಭವನ ನಿರ್ಮಿಸಬೇಕೆಂದು ಕೆಲ ಶಿಕ್ಷಕರು ಪಟ್ಟು ಹಿಡಿದಿದ್ದರೆ, ಕಾಲೇಜು ಆವರಣವನ್ನು ಹೊರತುಪಡಿಸಿ ಬೇರೆ ಯಾವುದೇ ಸ್ಥಳದಲ್ಲಿ ಗುರುಭವನ ನಿರ್ಮಿಸುವಂತೆ ಇನ್ನೂ ಕೆಲ ಶಿಕ್ಷಕರು ಒತ್ತಾಯಿಸುತ್ತಿದ್ದಾರೆ.

ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತವಾಗುತ್ತಿರುವ ಪರ-ವಿರೋಧ ಅಭಿಪ್ರಾಯಗಳು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವ ಹಂತಕ್ಕೆ ಏರಿದೆ.ಇದರಿಂದ ಈ ವರ್ಷವೂ ಗುರುಭವನ ನಿರ್ಮಾಣ ಕಾರ್ಯವು ಸಮಸ್ಯೆಗೆ ಒಳಗಾಗುವ ಸಾಧ್ಯತೆಯಿದೆ.

ಈಚೆಗೆಷ್ಟೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಜಿತ್‌ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೆಲ ಶಿಕ್ಷಕರು ಸರ್ಕಾರಿ ಕಾಲೇಜಿನಲ್ಲೇಗುರುಭವನ ನಿರ್ಮಿಸುವಂತೆ ಒತ್ತಾಯಿಸ್ದ್ದಿದರು. ಇದರ ಮಧ್ಯೆ ಶಿಕ್ಷಕರು ಆದಷ್ಟು ಶೀಘ್ರವೇ ಗುರುಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲು ಸಿದ್ಧತೆ ನಡೆಸಿದ್ದಾರೆ.

ನಂತರ ನಿರ್ಮಾಣ ಕಾರ್ಯಕ್ಕೆ ಮತ್ತೊಂದು ಪೂರ್ವಭಾವಿ ಸಭೆ ನಡೆಸಿ, ಕೆಲವೇ ದಿನಗಳಲ್ಲಿ ಕಾರ್ಯಾರಂಭಿಸಲು ತೀರ್ಮಾನಿಸಿದ್ದಾರೆ.  ಇದಕ್ಕೆ ವಿರೋಧಿಸುತ್ತಿರುವ ಕೆಲ ಶಿಕ್ಷಕರು ಯಾವುದೇ ಕಾರಣಕ್ಕೂ ನಿಗದಿತ ಸ್ಥಳದಲ್ಲಿ ಗುರುಭವನ ನಿರ್ಮಾಣಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

2010ರಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಪ್ರೊ.ಮುಮ್ತಾಜ್ ಅಲಿ ಖಾನ್, ಕಾಲೇಜು ಆವರಣದಲ್ಲೇ ಗುದ್ದಲಿ ಪೂಜೆ ನೆರವೇರಿಸಿದಾಗ,  ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಜಿಲ್ಲಾಡಳಿತ ಮಧ್ಯಪ್ರವೇಶಿಸಿ,ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಲ್ಲಿ ಕಂಡು ಬರದಿರುವ ಹಿನ್ನೆಲೆಯಲ್ಲಿ ಕೆಲ ಶಿಕ್ಷಕರು ನಿರ್ಮಾಣದ ಪರ ಒಲವು ತೋರುತ್ತಿದ್ದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಒಲವು: `ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಪಕ್ಕದಲ್ಲೇ ನಿರ್ಮಿಸಲಾದ ಡಾ.ಎ.ಪಿ.ಜೆ.ಅಬ್ದುಲ್‌ಕಲಾಂ ಸಮುದಾಯ ಭವನ, ಕಾಲೇಜು ಆವರಣದಲ್ಲಿನ ನಂದಿ ರಂಗಮಂದಿರದಲ್ಲಿ ಸಭೆ-ಸಮಾರಂಭ ನಡೆಯುವುದರಿಂದ  ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಗುರು ಭವನ ನಿರ್ಮಿಸಿದರೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಕೆಲ ಶಿಕ್ಷಕರು ವಾದಿಸುತ್ತಾರೆ. ಗುರುಭವನ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಆವರಣದಲ್ಲೇ ಇರಬೇಕು. ನಿರ್ಮಾಣ ಕಾರ್ಯಕ್ಕೆ ಅನಗತ್ಯ ಅಡ್ಡಿಪಡಿಸುವುದು ಸರಿಯಲ್ಲ~ ಎಂದು ಕೆಲ ಶಿಕ್ಷಕರು ವಾದಿಸುತ್ತಾರೆ.

ವಿರೋಧ: `ನಿಗದಿತ ಸ್ಥಳದ ಬದಲು ಬೇರೆಡೆ ಗುರುಭವನ ನಿರ್ಮಿಸಬೇಕು. ಸದ್ಯದ ಸ್ಥಳದಲ್ಲೇ ಗುರುಭವನ ನಿರ್ಮಿಸುವುದರಿಂದ ವಿದ್ಯಾರ್ಥಿಗಳು ವಿಶಾಲವಾದ ಮೈದಾನ ಕಳೆದುಕೊಳ್ಳುತ್ತಾರೆ.

ಸಭೆ-ಸಮಾರಂಭಗಳಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತದೆ. ಗುರುಭವನಕ್ಕೆ ಸಂಬಂಧಿಸಿದಂತೆ ನೀಲನಕ್ಷೆ ಇನ್ನೂ ಸಿದ್ಧವಾಗಿಲ್ಲ.

ನಿರ್ಮಾಣಕ್ಕೆ ವಂತಿಗೆ ನೀಡಿರುವ ಶಿಕ್ಷಕರ ಬಗ್ಗೆ ವಿವರಣೆ ಇಲ್ಲ. ಗುರುಭವನದ ನಡಾವಳಿ ಪ್ರತಿಯೂ ಇಲ್ಲ. ಮಾಹಿತಿ ಹಕ್ಕು ಕಾಯ್ದೆಯಡಿ ವಿವರಣೆ ಕೇಳಿದರೂ ಯಾವುದೇ ಮಾಹಿತಿ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ, ಗುರುಭವನ ನಿರ್ಮಾಣ ಹೇಗೆ ಸಾಧ್ಯ~ ಎಂದು ಕೆಲ ಶಿಕ್ಷಕರು ಪ್ರತಿವಾದಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.