ADVERTISEMENT

ಮತ್ತೆ ಬರದ ಛಾಯೆ ಹೊದ್ದ ಗುಡಿಬಂಡೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 11:35 IST
Last Updated 7 ಜುಲೈ 2017, 11:35 IST
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ಸುತ್ತಮುತ್ತ ಮಳೆ ಇಲ್ಲದೆ ಒಣಗುತ್ತಿರುವ ಬೆಳೆ
ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ಸುತ್ತಮುತ್ತ ಮಳೆ ಇಲ್ಲದೆ ಒಣಗುತ್ತಿರುವ ಬೆಳೆ   

ಗುಡಿಬಂಡೆ: ತಾಲ್ಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಡಿ 12,340 ಹೆಕ್ಟೇರ್‌ನಲ್ಲಿ ಕೃಷಿ ಇಲಾಖೆ ಬಿತ್ತನೆ ಗುರಿ ಹೊಂದಿದೆ. ಇದರಲ್ಲಿ 6,310 ಹೆಕ್ಟೇರ್ ನೀರಾವರಿ ಹಾಗೂ 6,030 ಹೆಕ್ಟೇರ್ ಮಳೆ ಆಶ್ರಿತ ಪ್ರದೇಶ ಸೇರಿದೆ.

ಆದರೆ ಸಮರ್ಪಕ ಮಳೆಯಾಗದ ಕಾರಣ ಈ ಗುರಿಯನ್ನು ಮುಟ್ಟುವುದು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಸತತ ಎಂಟು ವರ್ಷಗಳಿಂದ ತಾಲ್ಲೂಕಿನ ಉತ್ತಮ ಮಳೆ ಸುರಿದಿಲ್ಲ. ಕಳೆದ ಮೇ ಮತ್ತು ಜೂನ್‌ನಲ್ಲಿ ಬಿದ್ದ ಅಲ್ಪ ಪ್ರಮಾಣದ ಮಳೆಗೆ ರೈತರು ಖುಷಿಗೊಂ ಡಿದ್ದರು. ಬಿತ್ತನೆ ಆರಂಭಿಸಿದ್ದರು. ಈ ಬಾರಿ ಮತ್ತೆ ಮಳೆ ಸುರಿಯದ ಕಾರಣ ಕೃಷಿಗೆ ಹಿನ್ನಡೆಯಾಗಿದೆ.

ಈ ಸಮಯಲ್ಲಿ ತಾಲ್ಲೂಕಿನಲ್ಲಿ 168 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಇಲ್ಲಿಯವರೆಗೆ ಸುರಿದಿರುವುದು ಕೇವಲ 32 ಮಿ.ಮೀ. ವಾಡಿಕೆ ಮಳೆಗಿಂತ 136 ಮಿ.ಮೀ ಕಡಿಮೆ ಮಳೆಯಾಗಿದೆ. ಕೆಲವೆಡೆ ಮಳೆ ಪ್ರಮಾಣ ಕಡಿಮೆ ಇದ್ದರೂ ಬೀಜ ಬಿತ್ತೋಣ, ಮುಂದೆ ನೋಡೋಣ ಎಂದು ದೇವರ ಮೇಲೆ ಭಾರಹಾಕಿ ರೈತರು ಬೀಜ ಬಿತ್ತುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಈಗ ಒಟ್ಟು 178 ಹೆಕ್ಟೇರ್ ಬಿತ್ತನೆ ಪೂರ್ಣಗೊಂಡಿದೆ. ಮುಸುಕಿನ ಜೋಳ 43, ರಾಗಿ 18, ನೆಲಗಡಲೆ 38, ತೊಗರಿ 11, ಮೆಕ್ಕೆಜೋಳ 48, ಅಲಸಂದಿ 9, ಅವರೆ 8, ಭತ್ತ 3 ಹೆಕ್ಟೇರ್ ಸೇರಿ ಶೇ 10 ರಷ್ಟು ಬಿತ್ತನೆಯಾಗಿದೆ. ಈಗ ಮಳೆ ಸುರಿದರೆ ಮಾತ್ರ ಬಿತ್ತನೆ ಮಾಡಿರುವ ಹೊಲಗಳಲ್ಲಿ ಪೈರು ಚಿಗುರೊಡೆಯುತ್ತದೆ. ಫಸಲು ಬರುತ್ತದೆ. ಮಳೆ ಕೈ ಕೊಟ್ಟರೆ ಈ ವರ್ಷವೂ ತಾಲ್ಲೂಕಿನಲ್ಲಿ ಬರದ ಸ್ಥಿತಿ ಮುಂದುವರಿಯಲಿದೆ.

ಬೆಳೆ ವಿಮೆ: ‘ಮುಂಗಾರು ಹಂಗಾಮಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ಪರಿಹಾರ ನೀಡಲಾಗುವುದು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೈತರು ಸೌಲಭ್ಯ ಬಳಸಿಕೊಳ್ಳಬಹುದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅನಿಸ್ ಸಲ್ಮಾ ತಿಳಿಸಿದ್ದಾರೆ.

‘ಮುಸುಕಿನ ಜೋಳ (ನೀರಾವರಿ), ರಾಗಿ (ನೀರಾವರಿ), ತೊಗರಿ (ಮಳೆ ಆಶ್ರಿತ), ನೆಲಗಡಲೆ (ಮಳೆ ಆಶ್ರಿತ), ಹುರುಳಿ (ಮಳೆ ಆಶ್ರಿತ), ಟೊಮೆಟೊ (ನೀರಾವರಿ), ಮುಸುಕಿನ ಜೋಳ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ) ಬೆಳೆಗೆ ವಿಮೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಹತ್ತಿರದ ರೈತಸಂಪರ್ಕ ಕೇಂದ್ರ, ತಾಲ್ಲೂಕು ಕೃಷಿ ಇಲಾಖೆ ನಿರ್ದೇಶಕರ ಕಚೇರಿ ಸಂಪರ್ಕಿಸ ಬಹುದು’ ಎಂದು ತಿಳಿಸಿದ್ದಾರೆ.

ಅಂಕಿ ಅಂಶ
12,340 ಹೆಕ್ಟೇರ್ ಬಿತ್ತನೆ ಗುರಿ

136ಮಿ.ಮೀ ಮಳೆ ಕೊರತೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.