ADVERTISEMENT

ಮತ್ತೊಮ್ಮೆ ಶವಪರೀಕ್ಷೆ; ಪತಿ ಬಂಧನ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:04 IST
Last Updated 22 ಅಕ್ಟೋಬರ್ 2017, 5:04 IST

ಚಿಂತಾಮಣಿ: ಕಳೆದ ಜುಲೈನಲ್ಲಿ ನಡೆದ ತಾಲ್ಲೂಕಿನ ಅನಪ್ಪಲ್ಲಿ ಗ್ರಾಮದ ಪ್ರೇಮಾ ಎಂಬುವವರ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದಿದೆ. ಪ್ರೇಮಾ ಅವರನ್ನು ಪತಿ ವೆಂಕಟರೆಡ್ಡಿಯೇ ಕೊಲೆ ಮಾಡಿರಬಹುದು ಎಂದು ಶಂಕಿಸಿ ಶನಿವಾರ ಪೊಲೀಸರು ಹೂತಿದ್ದ ಶವವನ್ನು ಹೊರತೆಗೆದು ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಿದರು. ಅಲ್ಲದೆ ವೆಂಕಟರೆಡ್ಡಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

‘ಪ್ರೇಮಾ ಜುಲೈ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರನ್ನು ಕೊಲೆ ಮಾಡಲಾಗಿದೆ ಎಂದು ದೂರು ಬಂದಿದ್ದರಿಂದ ಮರು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ವಿವರ: ವೆಂಕಟರೆಡ್ಡಿ ಮತ್ತು ಪ್ರೇಮಾ ಬೆಂಗಳೂರಿನ ಕಾಡುಗೋಡಿಯಲ್ಲಿ ವಾಸವಾಗಿದ್ದರು. ಆದರೆ ವಿವಾಹಕ್ಕೂ ಮುನ್ನ ಪ್ರೇಮಾ ಅವರಿಗೆ ಹನುಮೈಗಾರಹಳ್ಳಿಯ ಶ್ರೀನಾಥ್‌ ಜತೆ ಸಂಬಂಧವಿತ್ತು. ಇದನ್ನು ತಿಳಿದ ವೆಂಕಟರೆಡ್ಡಿ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಇಬ್ಬರ ನಡುವೆ ಸಂಬಂಧ ಮುಂದುವರಿದಿತ್ತು. ನಂತರ ಇಬ್ಬರೂ ನಾಪತ್ತೆಯಾಗಿದ್ದರು.

ADVERTISEMENT

‘ನನ್ನ ಪತ್ನಿ ₹ 2 ಲಕ್ಷದೊಂದಿಗೆ ನಾಪತ್ತೆಯಾಗಿದ್ದಾಳೆ’ ಎಂದು 2017ರ ಜುಲೈ 10ರಂದು ವೆಂಕಟರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಮರುದಿನವೇ ಶ್ರೀನಾಥ್ ತಾಯಿ ಭಾಗ್ಯಮ್ಮ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕುರಿತು ಸಹ ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತಾಯಿಯ ಸಾವಿನ ವಿಷಯ ತಿಳಿದು ಶ್ರೀನಾಥ್ ಮತ್ತು ಪ್ರೇಮಾ ಅಂತ್ಯಕ್ರಿಯೆಗೆ ಊರಿಗೆ ಬಂದಿದ್ದರು. ಆಗ ಪೊಲೀಸರು ಇಬ್ಬರಿಗೂ ಬುದ್ಧಿವಾದ ಹೇಳಿ ಪ್ರೇಮಾ ಅವರನ್ನು ವೆಂಕಟರೆಡ್ಡಿ ಜತೆ ಕಳುಹಿಸಿದ್ದರು. ಇದಾದ ಕೆಲವೇ ದಿನಕ್ಕೆ ಪ್ರೇಮಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಂದಿನಿಂದ ಶ್ರೀನಾಥ್ ಸಹ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಅನೈತಿಕ ಸಂಬಂಧ ಮುಂದುವರಿಸಿದ್ದಕ್ಕೆ ಮತ್ತು ಮನೆಯಿಂದ ಪರಾರಿಯಾಗಿದ್ದಕ್ಕೆ ಆಕ್ರೋಶಗೊಂಡ ವೆಂಕಟರೆಡ್ಡಿ, ಆತನ ಪತ್ನಿ ಸೇರಿದಂತೆ ಮೂವರಿಗೂ ವಿಷ ನೀಡಿ ಕೊಲೆ ಮಾಡಿದ್ದಾನೆ’ ಎಂದು ಇತ್ತೀಚೆಗೆ ಕಾಡುಗೋಡಿ ಪೊಲೀಸ್‌ ಠಾಣೆಗೆ ಬಂದ ಅನಾಮಧೇಯ ಪತ್ರದಲ್ಲಿ ಬರೆಯಲಾಗಿದೆ. ಈ ಜಾಡು ಹಿಡಿದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.