ADVERTISEMENT

ಮದ್ಯ ಮಾರಾಟ: ಮಹಿಳೆಯರ ವಿರೋಧ

ಅಂಬೇಡ್ಕರ್ ಕಾಲೊನಿಯಲ್ಲಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಜೂನ್ 2015, 9:01 IST
Last Updated 15 ಜೂನ್ 2015, 9:01 IST
ಮದ್ಯ ಮಾರಾಟ ನಿಯಂತ್ರಣದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಅಂಬೇಡ್ಕರ್ ಕಾಲೊನಿಯ ಸಮುದಾಯ ಭವನದಲ್ಲಿ ಭಾನುವಾರ ಮಹಿಳೆಯರು ಸಭೆ ನಡೆಸಿದರು.
ಮದ್ಯ ಮಾರಾಟ ನಿಯಂತ್ರಣದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಅಂಬೇಡ್ಕರ್ ಕಾಲೊನಿಯ ಸಮುದಾಯ ಭವನದಲ್ಲಿ ಭಾನುವಾರ ಮಹಿಳೆಯರು ಸಭೆ ನಡೆಸಿದರು.   

ಚಿಕ್ಕಬಳ್ಳಾಪುರ: ನಗರದ ಅಂಬೇಡ್ಕರ್‌ ಕಾಲೊನಿ (ವಾರ್ಡ್‌ ಸಂಖ್ಯೆ–30) ವ್ಯಾಪ್ತಿಯ ಮನೆ ಮತ್ತು ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಮಹಿಳೆಯರು ಭಾನುವಾರ ಮೆರವಣಿಗೆ ನಡೆಸಿದರು.

ನಂತರ ಕಾಲೊನಿಯ ಸಮುದಾಯ ಭವನದಲ್ಲಿ ಸಭೆ ನಡೆಸಿದ ಮಹಿಳೆಯರು, ಬಹುತೇಕ ಯುವಜನರು ಮದ್ಯಕ್ಕೆ ದಾಸರಾಗುತ್ತಿದ್ದಾರೆ. ಮದ್ಯದ ದುಶ್ಚಟದಿಂದ ಯುವಜನರು ಕೆಲಸಕ್ಕೆ ಹೋಗುತ್ತಿಲ್ಲ. ಜೀವನ ಹಾಳು ಮಾಡಿಕೊಳ್ಳುತ್ತಿರುವ ಅವರು ಕುಟುಂಬ ಸದಸ್ಯರಿಗೂ ತೊಂದರೆ ನೀಡುತ್ತಿದ್ದಾರೆ ಎಂದರು.

ಕಾಲೊನಿ ನಿವಾಸಿ ಕೆ.ಸಿ.ಲಕ್ಷ್ಮಮ್ಮ ಮಾತನಾಡಿ, ಕಾಲೊನಿ ವ್ಯಾಪ್ತಿಯಲ್ಲಿ 500 ಮನೆಗಳಿದ್ದು, 10ಕ್ಕೂ ಹೆಚ್ಚು ಮನೆ ಮತ್ತು ಅಂಗಡಿಗಳಲ್ಲಿ ಕದ್ದುಮುಚ್ಚಿ ಮದ್ಯ ಮಾರಲಾಗುತ್ತಿದೆ ಎಂದು ತಿಳಿಸಿದರು.

ಪೊಲೀಸರು, ಅಬಕಾರಿ ಇಲಾಖೆಯವರು ಎಚ್ಚರಿಕೆ ನೀಡಿದರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಇದರ ಹಿನ್ನೆಲೆಯಲ್ಲಿ ನಾವೇ ಅವರಿಗೆ ಎಚ್ಚರಿಕೆ ನೀಡಬೇಕು. ಮದ್ಯ ಮಾರಾಟ ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಬೇಕು ಎಂದರು.

ನಿವಾಸಿ ಎಸ್.ಮಂಜುಳಾ ಮಾತನಾಡಿ, ಸುಮಾರು 30 ರಿಂದ 35 ವರ್ಷದೊಳಗಿನ ಯುವಜನರೇ ಮದ್ಯಕ್ಕೆ ಹೆಚ್ಚು ಬಲಿಯಾಗುತ್ತಿದ್ದಾರೆ. ಬೆಳಿಗ್ಗೆ ಚಹಾ ಅಥವಾ ಕಾಫಿ ಸೇವಿಸುವ ಬದಲು ಮದ್ಯ ಸೇವಿಸುವುದನ್ನೇ ರೂಢಿ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಕುಟುಂಬ ಸದಸ್ಯರ ಮೇಲೆ ದೌರ್ಜನ್ಯ ಎಸಗುವ ಅವರು ನಶೆ ಏರಿಸಿಕೊಂಡು ಎಲ್ಲಿ ಬೇಕೆಂದಲ್ಲಿ ಬಿದ್ದು ಜೀವನವನ್ನೇ ನಾಶಪಡಿಸಿಕೊಳ್ಳುತ್ತಿದ್ದಾರೆ. ಹಿರಿಯರ ಮಾತುಗಳನ್ನು ಸಹ ಕೇಳುವ ಸ್ಥಿತಿಯಲ್ಲಿ ಅವರಿಲ್ಲ ಎಂದರು. ನಿವಾಸಿಗಳಾದ ಶಕುಂತಲಮ್ಮ, ಪದ್ಮಮ್ಮ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.