ADVERTISEMENT

ಮನೆ, ಮನದಲ್ಲಿ ಕನ್ನಡಕ್ಕೆ ಆದ್ಯತೆ ಸಿಗಲಿ

ಕಾದಲವೇಣಿಯಲ್ಲಿ ‘ಶಾಲೆಗೊಂದು ಕನ್ನಡ ಕಾರ್ಯಕ್ರಮ’

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 6:27 IST
Last Updated 16 ಜೂನ್ 2018, 6:27 IST

ಗೌರಿಬಿದನೂರು: ಕನ್ನಡ ನಾಡು ಮತ್ತು ನುಡಿಗೆ ವೈಶಿಷ್ಟ ಇತಿಹಾಸ ಇದೆ. ಮನೆ, ಮನ, ಶಾಲೆ ಹಾಗೂ ಇನ್ನಿತರ ಎಲ್ಲ ಸಂದರ್ಭಗಳಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡುವ ಮೂಲಕ ಗೌರವ ನೀಡಬೇಕು ಎಂದು ಆಚಾರ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಿ.ನಾಗರತ್ನಾ ಹೇಳಿದರು.

ತಾಲ್ಲೂಕಿನ ಕಾದಲವೇಣಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಆಯೋಜಿಸಿದ್ದ 'ಶಾಲೆಗೊಂದು ಕನ್ನಡ ಕಾರ್ಯಕ್ರಮ'ದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್, ಸಾಮಾಜಿಕ ಜಾಲತಾಣಗಳ ವೀಕ್ಷಣೆಯ ಗೀಳಿಗೆ ಬೀಳದೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ನೀಡಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಗಮನ ನೀಡಬೇಕು ಎಂದು ತಿಳಿಸಿದರು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ವಿ. ರವೀಂದ್ರನಾಥ್ ಮಾತನಾಡಿ, 'ಗಡಿಭಾಗದ ತಾಲ್ಲೂಕಿನಲ್ಲಿ ತೆಲುಗಿನ ಪ್ರಭಾವದಿಂದ ಕನ್ನಡದ ಕಂಪು ಕಮರಬಾರದು. ಅದಕ್ಕಾಗಿ ಕನ್ನಡ ಮಾಧ್ಯಮದ ಶಾಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಮುಖ್ಯ ಶಿಕ್ಷಕ ಸಿ.ಎಚ್.ದೇವರಾಜಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನ್ನಡದ ಮಹತ್ವ ಮತ್ತು ಅದನ್ನು ಉಳಿಸಿ ಬೆಳೆಸಲು ಕಾರ್ಯಕ್ರಮ ಸಹಕಾರಿ ಆಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಟಿ.ನಂಜುಂಡಪ್ಪ, ಗೌರೀಶ್, ಕೃಷ್ಣಕುಮಾರಿ, ಮದ್ದಿಲೇಟಿ, ರಾಜಶೇಖರ್, ಪಿ.ವಿ.ಸುವರ್ಣಮ್ಮ, ಭೋಜರಾಜ್, ನೇತ್ರಾವತಿ, ಡಿ.ಕಮಲಾ, ಸುಧಾಕರ್ ರೆಡ್ಡಿ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.