ADVERTISEMENT

ಮಳೆ, ಗಾಳಿಯಲ್ಲಿ ಯಾತನೆ: ತಡಿಕೆ ಗುಡಿಸಲೇ ಆಸರೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:25 IST
Last Updated 14 ಜೂನ್ 2013, 10:25 IST

ಚಿಂತಾಮಣಿ:  ಆಕಸ್ಮಿಕ ಬೆಂಕಿಗೆ ತುತ್ತಾಗಿ ಮನೆ ಕಳೆದುಕೊಂಡ ದಲಿತ ಕುಟುಂಬ ಈಗ ಸೂರಿಗಾಗಿ ಪರದಾಡುತ್ತಿದೆ. ಇದ್ದ ಒಂದೇ  ಒಂದು ಸೂರು ಜನವರಿಯಲ್ಲಿ ಬೆಂಕಿಗೆ ಆಹುತಿಯಾಗಿದೆ. ಅಂದಿನಿಂದಲೂ ಈ ಕುಟುಂಬಕ್ಕೆ ತಡಿಕೆಯ ಗುಡಿಸಲೇ ಅರಮನೆಯಾಗಿದೆ. ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದೇ ಹರಕುಮುರುಕು ಗುಡಿಸಲಿನಲ್ಲಿ ಬದುಕು ಸವೆಸುತ್ತಿರುವ ಈ ಕುಟುಂಬದ ಸ್ಥಿತಿ ದಾರುಣವಾಗಿದೆ.

ತಾಲ್ಲೂಕಿನ ಕುರುಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಹಳ್ಳಿ ಗ್ರಾಮದ ಕೇಶವ ಮೂರ್ತಿ,  ಪತ್ನಿ ಮತ್ತು 5 ಮಕ್ಕಳ ತುಂಬು ಸಂಸಾರ. ಮನೆ ಕಳೆದುಕೊಂಡು ಗುಡಿಸಲು ಸೇರಿದ ಈ ನತದೃಷ್ಟ ಕುಟುಂಬ, ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಜನವರಿ 7ರಂದು ಬೆಂಕಿಗೆ ಆಹುತಿಯಾದ ಮನೆಯಲ್ಲಿ ಆಡುಗಳು, ದವಸ ಧಾನ್ಯ ಕಳೆದುಕೊಂಡಿದೆ.

ಮನೆ ಕಳೆದುಕೊಂಡ ನಂತರ ಗ್ರಾಮದ ಹೊರಭಾಗದಲ್ಲಿ ಅತ್ತ ಗುಡಿಸಲು ಅಲ್ಲ, ಇತ್ತ ಚಪ್ಪರವೂ ಅಲ್ಲದ ತಡಿಕೆಗಳಿಂದ ಚಿಕ್ಕ ಗುಡಿಸಲನ್ನು ಕಟ್ಟಿಕೊಂಡಿದ್ದಾರೆ. 6 ತಿಂಗಳಿನಿಂದಲೂ ತಡಿಕೆಯ ಗುಡಿಸಲಿನಲ್ಲೇ ವಾಸ ಮಾಡುತ್ತಿರುವ ಎಂಟು ಸದಸ್ಯರ ತುಂಬು ಕುಟುಂಬ ತುತ್ತು ಅನ್ನಕ್ಕೂ ಪರದಾಡುತ್ತಿದೆ. ಮಳೆ, ಗಾಳಿಗಿಂತ ಗುಡಿಸಲು ಸುತ್ತ ಬೆಳೆದಿರುವ ಕಳ್ಳಿಪೊದೆ, ಬೇಲಿಯಿಂದ ಹಾವು, ಚೇಳು ಅಥವಾ ವಿಷಜಂತುಗಳು ಎಲ್ಲಿ ಬರುತ್ತವೋ ಕಚ್ಚುತ್ತವೋ ಎಂಬ ಭೀತಿಯಲ್ಲಿ ಇವರು ದಿನದೂಡುತ್ತಿದ್ದಾರೆ. ಮಳೆ ಬಂದ ಎಷ್ಟೋ ರಾತ್ರಿಗಳು ಜಾಗರಣೆ ಮಾಡಿದ್ದೇವೆ ಎಂದು ಕೇಶವಮೂರ್ತಿ ದುಃಖ ತೋಡಿಕೊಳ್ಳುತ್ತಾರೆ.

ನರ ದೌರ್ಬಲ್ಯದಿಂದ ಬಳಲುತ್ತಿರುವ ವೃದ್ಧೆ, ಮನೆಯ ಯಜಮಾನ  ಹಾಗೂ ಪತ್ನಿ, 4 ಹೆಣ್ಣುಮಕ್ಕಳು, ಗಂಡು ಮಗು ಸೇರಿ ಒಟ್ಟು 8 ಮಂದಿಯಿರುವ ಈ  ಕುಟುಂಬ ಸ್ಥಿತಿ ನರಕಯಾತನೆಯಾಗಿದೆ.

ಮನೆಗೆ ಬೆಂಕಿ ಬಿದ್ದಾಗ ಇತ್ತ ಧಾವಿಸಿದ್ದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸೂರು ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ವಸತಿಯೂ ಇಲ್ಲ, ನಿವೇಶನವೂ ನೀಡಿಲ್ಲ ಎಂದು ಕುಟುಂಬದವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಿ, ಸೂರು ಕಲ್ಪಿಸಿಕೊಡಲಿ ಎಂಬುದು ಈ ಕುಟುಂಬದ ಬೇಡಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.