ADVERTISEMENT

ರಕ್ತಚಂದನ ಸಿಕ್ಕರೂ ಪತ್ತೆಯಾಗದ ಆರೋಪಿಗಳು!

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 8:22 IST
Last Updated 5 ಸೆಪ್ಟೆಂಬರ್ 2013, 8:22 IST

ಚಿಕ್ಕಬಳ್ಳಾಪುರ: ಆಂಧ್ರಪ್ರದೇಶಕ್ಕೆ ಸೇರಿದ ವಾಹನ ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ನಾಲ್ಕು ದಿನಗಳ ಹಿಂದೆ ಅಪಘಾತಕ್ಕೀಡಾಗಿ ಅದರಲ್ಲಿದ್ದ 1,300 ಕೆ.ಜಿಯ ಲಕ್ಷಾಂತರ ರೂಪಾಯಿ ಮೌಲ್ಯದ ರಕ್ತಚಂದನ ದಿಮ್ಮಿಗಳು ಪತ್ತೆಯಾದ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ.

ಇದುವರೆಗೆ ಪ್ರಕರಣದ ಆರೋಪಿಗಳು ಪತ್ತೆಯಾಗಿಲ್ಲ ಮತ್ತು ಮರದ ದಿಮ್ಮಿಗಳು ಎಲ್ಲಿಂದ ಸಾಗಣೆ ಮಾಡಲಾಗುತ್ತಿತ್ತು ಎಂಬ ವಿಷಯ ಕೂಡ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಗುಡಿಬಂಡೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಯಾರ ಕೈವಾಡವಿದೆ ಎಂಬುದು ಕೂಡ ಬೆಳಕಿಗೆ ಬಂದಿಲ್ಲ.

ಶನಿವಾರ ಬೆಳಿಗ್ಗೆ ವಾಹನ ಅಪಘಾತಕ್ಕೀಡಾಗಿದ್ದರೂ ಅದರ ವಿಷಯ ಪೊಲೀಸರಿಗೆ ತಿಳಿದಿದ್ದೇ ಸೂರ್ಯ ನೆತ್ತಿಗೇರಿದ ನಂತರ. ಆದರೆ ಅಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡ ಇಬ್ಬರು ಆರೋಪಿಗಳು ಯಾರ ಕಣ್ಣಿಗೂ ಕಾಣದಂತೆ ತಲೆಮರೆಸಿಕೊಂಡರು. ವಾಹನ ನಜ್ಜುಗುಜ್ಜಾಗಿರುವ ಕಾರಣ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಎಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದು ಕೂಡ ಇನ್ನೂ ತಿಳಿದುಬಂದಿಲ್ಲ. ಆಂಧ್ರಪ್ರದೇಶದ ಗಡಿ ಪ್ರದೇಶ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಯುತ್ತದೆ ಎಂಬ ಮಾಹಿತಿ ಬಿಟ್ಟರೆ ಉಳಿದಂತೆ ಎಲ್ಲವೂ ನಿಗೂಢ.

ರಕ್ತಚಂದನ ಅಕ್ರಮ ಸಾಗಣೆ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತಪಡಿಸುವ ಪೊಲೀಸರು, ಮರದ ದಿಮ್ಮಿಗಳ ಸಾಗಣೆಗಾಗಿ ಬಳಸುತ್ತಿರುವ ವಾಹನಗಳ ಬಗ್ಗೆಯೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬೃಹತ್ ಲಾರಿಗಳಲ್ಲಿ ಸಾಗಣೆ ಮಾಡುತ್ತಿದ್ದ ಮರದ ದಿಮ್ಮಿಗಳನ್ನು ಕೆಲ ತಿಂಗಳುಗಳಿಂದ ಅಂಬಾಸಡರ್ ಕಾರು, ಟಾಟಾ ಸುಮೊ ಮತ್ತು ಕ್ರೂಸರ್‌ನಂತಹ ವಾಹನಗಳಲ್ಲಿಯೂ ಸಾಗಣೆ ಮಾಡಲಾಗುತ್ತಿದೆ. ಅತ್ಯಂತ ಗೋಪ್ಯ ಮತ್ತು ಚಾಣಾಕ್ಷತನದಿಂದ ಈ ಕೃತ್ಯ ನಡೆಸಲಾಗುತ್ತಿದೆ ಎನ್ನುತ್ತಾರೆ ಪೊಲೀಸರು.

`ತಮಿಳುನಾಡು, ಕೇರಳ ಹಾಗೂ ಬೆಂಗಳೂರಿನಲ್ಲಿ ರಕ್ತಚಂದನಕ್ಕೆ ಭಾರಿ ಬೇಡಿಕೆಯಿದೆ. ಆಂಧ್ರಪ್ರದೇಶದ ಗಡಿಭಾಗದಲ್ಲೇ ಹೆಚ್ಚು ಮರಗಳನ್ನು ಬೆಳೆಸುತ್ತಿದ್ದು, ಅಲ್ಲಿಂದ ಕಡಿದು ವಾಹನಗಳಲ್ಲಿ ಸಾಗಣೆ ಮಾಡಲಾಗುತ್ತದೆ. ಬಾಗೇಪಲ್ಲಿ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಸಿಕ್ಕಿ ಬೀಳಬಾರದು ಎಂಬ ಕಾರಣಕ್ಕೆ ಕೆಲವರು ರಾತ್ರಿ ವೇಳೆ ಸಾಗಿಸುತ್ತಾರೆ. ಇನ್ನೂ ಕೆಲವರು ಮರದ ದಿಮ್ಮಿಗಳನ್ನು ಕಾರು, ಕ್ರೂಸರ್‌ನಂತಹ ವಾಹನಗಳಲ್ಲಿ ಸಾಗಿಸುತ್ತಾರೆ. ಎಲ್ಲರಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ವೇಗವಾಗಿ ಚಾಲನೆ ಮಾಡಿದಾಗ ಅಪಘಾತಕ್ಕೀಡಾಗುತ್ತಾರೆ' ಎಂದು ಗುಡಿಬಂಡೆ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಶಿವಕುಮಾರ್ `ಪ್ರಜಾವಾಣಿ'ಗೆ ತಿಳಿಸಿದರು.

ಪ್ರಾಥಮಿಕ ಹಂತದ ತನಿಖೆ ಪ್ರಕಾರ, ನಜ್ಜುಗುಜ್ಜಾಗಿರುವ ವಾಹನದಲ್ಲಿ ಇಬ್ಬರು ಇದ್ದರು ಎಂಬುದು ದೃಢಪಟ್ಟಿದೆ. ಆದರೆ ಅವರು ಕರ್ನಾಟಕದ ಗಡಿಯಲ್ಲಿ ತಲೆಮರೆಸಿಕೊಂಡಿದ್ದಾರೆಯೇ ಅಥವಾ ಆಂಧ್ರಪ್ರದೇಶಕ್ಕೆ ಹಿಂತಿರುಗಿದ್ದಾರೆಯೇ ಎಂಬುದು ಗೊತ್ತಾಗುತ್ತಿಲ್ಲ. ಆಂಧ್ರಪ್ರದೇಶದ ಪೆನುಕೊಂಡ, ಅನಂತಪುರ ಸೇರಿದಂತೆ ಗಡಿ ಪ್ರದೇಶಗಳಲ್ಲಿನ ಆಸ್ಪತ್ರೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದೇವೆ. ಚಿಕ್ಕಬಳ್ಳಾಪುರ, ಬೆಂಗಳೂರು ಮುಂತಾದ ಊರುಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.