ADVERTISEMENT

ರಾಜಕೀಯ ಅಸ್ಥಿರತೆ ಅಭಿವೃದ್ಧಿಗೆ ಮಾರಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 8:40 IST
Last Updated 22 ಜನವರಿ 2011, 8:40 IST

ಚಿಂತಾಮಣಿ: ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯು ರಾಜ್ಯದ ಸಮಗ್ರ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕೈವಾರ ಹೋಬಳಿಯ ಚೆನ್ನಕೇಶವಪುರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾಗಿದ್ದ 5 ಲಕ್ಷ ರೂ ವೆಚ್ಚದ ಸಿಮೆಂಟ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ ಮೇಲೆ ಹಲವಾರು ಆರೋಪಗಳಿವೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ನಿರಂತರವಾಗಿ ರಾಜಕೀಯ  ಆಸ್ಥಿರತೆ ಕಾಡುತ್ತಿದೆ. ಇದರಿಂದ ಆಡಳಿತ ಕುಸಿದು ರಾಜ್ಯದ ಅಭಿವೃದ್ಧಿಯ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದರು.

ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿಗೊಳಿಸುವ ಸಲುವಾಗಿ ಸುಮಾರು 5 ಕೋಟಿ ರೂಗಳ ವೆಚ್ಚದಲ್ಲಿ ಕೈವಾರ ಹೋಬಳಿಯ ಅನೇಕ ಗ್ರಾಮಗಳಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ಆರಂಭವಾಗಲಿವೆ. ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕೈವಾರ ಹೋಬಳಿಯ ಕೆಲವು ಗ್ರಾಮಗಳಲ್ಲಿ ರಸ್ತೆ ದುರಸ್ಥಿ ಕಾಮಗಾರಿಗೆ 13 ರಿಂದ 14 ಕೋಟಿ ರೂಗಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಗೆಲುವನ್ನು ತಂದುಕೊಟ್ಟ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ಶಾಸಕರು ಅಭಿನಂದನೆ  ಸಲ್ಲಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಯಾವಾಗಬೇಕಾದರೂ ವಿಧಾನಸಭಾ ಚುನಾವಣೆಗಳು ಬರಬಹುದು, ಕಾರ್ಯಕರ್ತರು ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಸೂಚಿಸಿದರು. ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು ಪ್ರಜಾಪ್ರಭುತ್ವಕ್ಕೆ ಅಪಚಾರ ಎಸಗುವ ರೀತಿಯಲ್ಲಿವೆ. ಮುಂದಾದರೂ ಜನತೆಯ ನಂಬಿಕೆ ಗಳಿಸುವ ರೀತಿಯಲ್ಲಿ ರಾಜಕಾರಣ ನಡೆಯುವಂತಾಗಲಿ ಎಂದರು.

ಕೈವಾರ ಹೋಬಳಿಯ ಬ್ಯಾಲಹಳ್ಳಿ, ನೆರ್ನಕಲ್ಲು, ಹಿರೇಕಟ್ಟಿಗೇನಹಳ್ಳಿ ಗ್ರಾಮಗಳಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.  ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ವಿ.ಸುಬ್ಬಾರೆಡ್ಡಿ, ಜಿ.ಪಂ.ಸದಸ್ಯ ಚಿನ್ನಪ್ಪ, ತಾ.ಪಂ.ಸದಸ್ಯ ಸುಲ್ತಾನ್ ಷರೀಫ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣೇಗೌಡ, ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಮುಖಂಡರಾದ ನಂಜುಂಡಗೌಡ, ಮಂಜುನಾಥರೆಡ್ಡಿ, ವೆಂಕಟರಮಣಪ್ಪ, ಸೀತಾರಾಮರೆಡ್ಡಿ, ಮುನಿರೆಡ್ಡಿ, ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.