ADVERTISEMENT

ರೇಷ್ಮೆ ಬೆಳೆಯಲ್ಲಿ ತಾಂತ್ರಿಕೃತ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 8:25 IST
Last Updated 4 ಅಕ್ಟೋಬರ್ 2012, 8:25 IST

ಶಿಡ್ಲಘಟ್ಟ: ಕಡಿಮೆ ವೆಚ್ಚದಲ್ಲಿ ಹುಳು ಸಾಕಣೆ ಮನೆಗಳ ನಿರ್ಮಾಣಕ್ಕೆ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಉತ್ಪಾದನಾ ಸಂಸ್ಥೆಯ ರೇಷ್ಮೆ ಹುಳು ಸಾಕಣೆ ಶಾಖೆ ವಿಜ್ಞಾನಿಗಳು ತಾಂತ್ರಿಕತೆ ಅಭಿವೃದ್ಧಿಪಡಿಸ್ದ್ದಿದಾರೆ. 

 ಕಟ್ಟಡ ನಿರ್ಮಾಣಕ್ಕೆ ಸ್ಥಳೀಯವಾಗಿ ದೊರಕುವ ಬಿದಿರು ಮತ್ತು ಸರ್ವೆ ಮರವನ್ನು ಬಳಸಲಾಗಿದೆ. ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ತಂತ್ರಜ್ಞಾನವನ್ನೇ ಅಳವಡಿಸಿಕೊಂಡಿದ್ದರೂ ಈ ಮನೆಯು ಹೆಚ್ಚು ಭಾರ ಇರುವುದಿಲ್ಲ. ಇದರಿಂದ ಕಟ್ಟಡದ ಅಡಿಪಾಯದ ವೆಚ್ಚದಲ್ಲಿ ಗಣನೀಯ ಉಳಿತಾಯವಾಗುತ್ತದೆ.

ಗೋಡೆಗಳಿಗೆ ಬಿದಿರಿನ ಸೀಳು, ತಂತಿ ಜಾಲರಿ ಅಳವಡಿಸಿ ಎರಡೂ ಬದಿಯಲ್ಲಿ ಸಿಮೆಂಟ್‌ನಿಂದ ಪ್ಲಾಸ್ಟಿಂಗ್ ಮಾಡಲಾಗಿದೆ. ಇದರಿಂದ ಗೋಡೆಗಳು ವಾತಾವರಣದ ವೈಪರೀತ್ಯ ತಡೆಯುವಷ್ಟು ಸದೃಢವಾಗಿದೆ. ಛಾವಣಿಗೆ 0.5 ಮಿ.ಮೀ. ಬಿಳಿಬಣ್ಣದ ತಗಡು ಬಳಸಲಾಗಿದ್ದು, ಬಿಸಿಲಿನ ಪ್ರಖರತೆ ಪ್ರತಿಫಲನಗೊಳಿಸಿ ಉಷ್ಣತೆ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಸಾಂಪ್ರದಾಯಿಕ ರೇಷ್ಮೆ ಹುಳು ಸಾಕಣೆ ಮನೆಗೆ ಹೋಲಿಸಿದಲ್ಲಿ ವೆಚ್ಚ ಶೇ 50ಕ್ಕಿಂತಲೂ ಹೆಚ್ಚು ಉಳಿತಾಯವಾಗಲಿದೆ.

 `ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಉತ್ಪಾದನಾ ಸಂಸ್ಥೆಯಲ್ಲಿ ರೇಷ್ಮೆ ತಳಿ ಅಭಿವೃದ್ಧಿ ಶಾಖೆ, ರೇಷ್ಮೆ ಬೀಜ ತಂತ್ರಜ್ಞಾನ ಶಾಖೆ, ರೇಷ್ಮೆ ಹುಳು ಸಾಕಣೆ ಶಾಖೆ, ರೇಷ್ಮೆ ಅಂಗಕ್ರಿಯಾ ಶಾಖೆ, ರೇಷ್ಮೆ ಹುಳು ರೋಗ ಶಾಸ್ತ್ರ ಶಾಖೆ ಮತ್ತು ಕೀಟ ಶಾಸ್ತ್ರ ಎಂಬ ಆರು ಶಾಖೆಗಳಿವೆ.

ರಾಜ್ಯದ ವಾತಾವರಣಕ್ಕೆ ಹೊಂದಿಕೊಳ್ಳುವ ಗಡುಸಾದ ರೇಷ್ಮೆ ತಳಿಗಳ ಅಭಿವೃದ್ಧಿ, ದ್ವಿತಳಿ ರೇಷ್ಮೆ ತಳಿಗಳಿಗೆ ಬೇಕಾದ ಹುಳು ಸಾಕಣೆ ತಂತ್ರಜ್ಞಾನ, ಉತ್ಪಾದನಾ ವೆಚ್ಚ ತಗ್ಗಿಸಿ, ಉತ್ಪಾದಕತೆಯನ್ನು ಹೆಚ್ಚಿಸುವ ತಾಂತ್ರಿಕತೆ ಅಭಿವೃದ್ಧಿ, ರೇಷ್ಮೆ ಹುಳುಗಳ ಆಹಾರದ ಪೌಷ್ಟಿಕತೆ ಹೆಚ್ಚಿಸುವ ಪ್ರಯೋಗ, ರೇಷ್ಮೆ ಹುಳುಗಳ ರೋಗನಿಯಂತ್ರಣ ಪ್ರಯೋಗ ಮತ್ತು ರೇಷ್ಮೆ ಕೃಷಿಗೆ ಉಪದ್ರವಕಾರಿಯಾದ ಕೀಟಗಳ ನಿಯಂತ್ರಣಕ್ಕೆ ಹತೋಟಿ ಕ್ರಮ ಅಭಿವೃದ್ಧಿಪಡಿಸುವುದು ಶಾಖೆಗಳ ಉದ್ದೇಶ. 

`ರೇಷ್ಮೆ ಹುಳು ರೋಗ ಶಾಸ್ತ್ರ ಶಾಖೆ ವಿಜ್ಞಾನಿಗಳು `ಸಂವರ್ಧನ~ ಮತ್ತು `ಸುರಕ್ಷಾ ಗ್ರೀನ್~ ಎಂಬ 2 ಸಸ್ಯಜನಕ ಹಾಸು ಸೋಂಕು ನಿವಾರಕಗಳನ್ನು ಕಂಡುಹಿಡಿದಿದ್ದಾರೆ. ಇದು ರೇಷ್ಮೆ ಬೆಳೆಗಾರರಿಗೆ ವರದಾನವಾಗಲಿದೆ~ ಎಂದು ಈಚೆಗೆ ಸಂಶೋಧನಾ ಪರಿಶೀಲನಾ ಸಭೆಯಲ್ಲಿದ್ದ ರೈತ ಗೋಪಾಲಗೌಡ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.