ADVERTISEMENT

ರೇಷ್ಮೆ ಮಾರುಕಟ್ಟೆ ಅಧಿಕಾರಿಗಳ ಚುನಾವಣೆ ನಿಯೋಜನೆ: ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 11:40 IST
Last Updated 17 ಏಪ್ರಿಲ್ 2013, 11:40 IST

ಶಿಡ್ಲಘಟ್ಟ: ಚುನಾವಣೆ ಸಮಯದಲ್ಲಿ ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚುವ ಪರಿಸ್ಥಿತಿ ತಲೆದೋರುತ್ತದೆ ಎಂದು ಆತಂಕಗೊಂಡಿರುವ ರೈತರು ಮಂಗಳವಾರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

`ಪಟ್ಟಣದ ರೇಷ್ಮೆ ಗೂಡಿನ ಮಾರುಕಟ್ಟೆಯ ಬಹುತೇಕ ಅಧಿಕಾರಿಗಳನ್ನು ಚುನಾವಣೆ ಕೆಲಸಕ್ಕೆ ನಿಯೋಜನೆ ಮಾಡಿರುವುದರಿಂದ ವ್ಯಾಪಾರ- ವಹಿವಾಟಿಗೆ ತೊಂದರೆಯಾಗುತ್ತದೆ. ಲಕ್ಷಾಂತರ ಮಂದಿ ರೈತರು, ರೀಲರುಗಳು ಮತ್ತು ಕೂಲಿ ಕಾರ್ಮಿಕರು ರೇಷ್ಮೆ ಗೂಡಿನ ಮೇಲೆ ಅವಲಂಬಿತರಾಗಿದ್ದಾರೆ. ಉದ್ಯಮವು ಆರ್ಥಿಕ ನಷ್ಟಕ್ಕೆ ಒಳಗಾಗುತ್ತದೆ' ಎಂದು ರೈತರು ಆತಂಕ ವ್ಯಕ್ತಪಡಿಸಿದರು.

`39 ಮಂದಿ ಅಧಿಕಾರಿಗಳಲ್ಲಿ 37 ಮಂದಿಯನ್ನು ಚುನಾವಣೆ ಕೆಲಸಕ್ಕೆ ನೇಮಿಸಲಾಗಿದೆ. ಇದರಿಂದ ಆಗುವ ತೊಂದರೆಗಳನ್ನು ತಪ್ಪಿಸಲು ಸೂಕ್ತ ರೀತಿ ಕ್ರಮ ಕೈಗೊಳ್ಳಬೇಕು. ವ್ಯಾಪಾರ-ವಹಿವಾಟಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ರೈತರು, ರೀಲರುಗಳು ಬೀದಿ ಪಾಲಾಗುವುದನ್ನು ತಪ್ಪಿಸಲು ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಬೇಕು. ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು' ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಮನವಿಪತ್ರ ಸ್ವೀಕರಿಸಿದ ತಹಶೀಲ್ದಾರ್ ಹನುಮಂತರಾಯ ಮಾತನಾಡಿ, `ರೇಷ್ಮೆ ಉದ್ಯಮಕ್ಕೆ ತೊಂದರೆಯಾಗುವುದು ಗಮನಕ್ಕೆ ಬಂದಿದೆ. ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗುವುದು. ಅವರ ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಸೂಕ್ತ ಕ್ರಮ ಜರುಗಿಸಲಾಗುವುದು' ಎಂದರು. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಘಟನೆ ತಾಲ್ಲೂಕು ಘಟಕ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಉಪಾಧ್ಯಕ್ಷ ಮುನಿನಂಜಪ್ಪ, ಕಾರ್ಯದರ್ಶಿ ಕೃಷ್ಣಪ್ಪ, ಖಜಾಂಚಿ ಮಳಮಾಚನಹಳ್ಳಿ ದೇವರಾಜ್, ಆನೂರು ಶ್ರೀನಿವಾಸ್, ಅಂಬರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.