ADVERTISEMENT

ರೈತರಿಗೆ ತಾಂತ್ರಿಕತೆ ಪರಿಚಯಿಸಿದ ವಿಜ್ಞಾನಿಗಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 9:10 IST
Last Updated 23 ಸೆಪ್ಟೆಂಬರ್ 2011, 9:10 IST

ಶಿಡ್ಲಘಟ್ಟ: ರೇಷ್ಮೆಗೂಡಿನ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸಲು ಮತ್ತು ಕೆಲಸಗಾರರ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆಲವು ತಾಂತ್ರಿಕತೆಗಳನ್ನು ವಿಜ್ಞಾನಿಗಳು ಸಂಶೋಧಿಸಿರುವುದಾಗಿ ಬೆಂಗಳೂರಿನ ತಲಘಟ್ಟಪುರದ ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿ ಡಾ.ರಾಧಾಕೃಷ್ಣ ತಿಳಿಸಿದರು.

 ತಾಲ್ಲೂಕಿನ ಎ.ಹುಣಸೇನಹಳ್ಳಿ ಗ್ರಾಮದಲ್ಲಿ ಗುರುವಾರ ರೈತರಿಗೆ ಉಪಯುಕ್ತವಾದ ತಾಂತ್ರಿಕತೆಗಳ ಪರಿಚಯಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೂತನ ಮಾದರಿಯ ಚಂದ್ರಿಕೆ ಹಾಗೂ ಬಲೆ ಹಾಸಿ ಹಣ್ಣಾದ ಹುಳುವನ್ನು ಆಯುವ ವಿಧಾನಗಳಿಂದ ಶೇಕಡಾ 60 ರಷ್ಟು ಕೆಲಸಗಾರರ ಸಂಖ್ಯೆ ಹಾಗೂ ಅವರ ಮೇಲಿನ ಅವಲಂಬನೆಯನ್ನು ಕಡಿತಗೊಳಿಸಬಹುದು. ಸ್ಥಳ ಮತ್ತು ಸಮಯದ ಉಳಿತಾಯ. ರೇಷ್ಮೆ ನೂಲು ವ್ಯರ್ಥವಾಗುವುದನ್ನು ತಡೆಯಬಹುದು. ಗುಣಮಟ್ಟದ ಗೂಡಿನ ಉತ್ಪಾದನೆ ಹಾಗೂ ಅಧಿಕ ಲಾಭಾಂಶ ಪಡೆಯಬಹುದು. ಚಂದ್ರಿಕೆಯ ಬೆಲೆಯಲ್ಲೂ ಹಣ ಉಳಿಸಬಹುದು ಎಂದು ವಿವರಿಸಿದರು.

 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೇಷ್ಮೆ ಬೆಳೆಗಾರರು ಹೆಚ್ಚಾಗಿರುವ ಎ.ಹುಣಸೇನಹಳ್ಳಿ ಗ್ರಾಮವನ್ನು ಈ ನೂತನ ತಾಂತ್ರಿಕತೆಯನ್ನು ಪರಿಚಯಿಸಲು ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಆಯ್ಕೆ ಮಾಡಿಕೊಂಡಿದೆ. ರೇಷ್ಮೆ ಬೆಳೆಗಾರರಿಗೆ ಉಚಿತವಾಗಿ ಕೆಲವು ನೂತನ ಮಾದರಿ ಚಂದ್ರಿಕೆ, ಬಲೆ ಹಾಗೂ ಹಿಪ್ಪುನೇರಳೆ ಸೊಪ್ಪಿಗೆ ಪೋಷಕಾಂಶಗಳನ್ನು ನೀಡುವ ನುಆಲ್ಗಿ ಫೋಲಿಯಾರ್ ಸ್ಪ್ರೇ ನೀಡುತ್ತೇವೆ.ಅಲಾಖೆ ಸಿಬ್ಬಂದಿ ವಾರಕ್ಕೊಮ್ಮೆ ಭೇಟಿ ನೀಡಿ ಮಾರ್ಗದರ್ಶನ ನೀಡುತ್ತಾರೆ. ಈ ಭಾಗದ ಚಂದ್ರಿಕೆ ತಯಾರಕರಿಗೂ ಸಂಸ್ಥೆಯಿಂದ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದು ಹೇಳಿದರು.

 ಈ ಸಂದರ್ಭದಲ್ಲಿ ವಿಜ್ಞಾನಿ ಡಾ.ಮಹಾರೆಡ್ಡಿ, ಸಂಶೋಧನಾ ಸಂಸ್ಥೆಯ ಮಧುಸೂದನ್, ರೇಷ್ಮೆ ಉಪನಿರ್ದೇಶಕ ಚಂದ್ರು, ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕ ಹನುಮಂತರಾಯಪ್ಪ, ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಎನ್.ಶಂಕರಪ್ಪ, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಎಂ.ಸಿ.ಚಂದ್ರಪ್ಪ ಮತ್ತಿತರರು ಹಾಜರಿದ್ದರು.

ಆಸ್ಪತ್ರೆಗೆ ನಿವೇಶನ ಭರವಸೆ
ಗುಡಿಬಂಡೆ: ತಾಲ್ಲೂಕಿನಲ್ಲಿ ಸ್ವಯಂ ಸೇವಾ ಸಂಸ್ಥೆ ಬಡವರಿಗಾಗಿ ಆಸ್ಪತ್ರೆ ನಿರ್ಮಿಸಲು ಮುಂದಾದರೆ ಸೂಕ್ತ ಜಾಗ ಗುರುತಿಸಿ ನೀಡಲು ತಾಲ್ಲೂಕು ಆಡಳಿತ ಸಿದ್ಧವಿದೆ ಎಂದು ತಹಶೀಲ್ದಾರ್ ಮುನಿವೀರಪ್ಪ ತಿಳಿಸಿದರು.
ಸಾಗರ್ ಅಪೊಲೋ ಆಸ್ಪತ್ರೆ, ಲಯನ್ಸ್ ಕ್ಲಬ್, ಪ್ರಗತಿ ಗ್ರಾಮೀಣ ಬ್ಯಾಂಕ್ ವತಿಯಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಈಚೆಗೆ ನಡೆದ ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಗತಿ ಗ್ರಾಮೀಣ ಬ್ಯಾಂಕ್ ಜನರಲ್ ಮ್ಯಾನೇಜರ್ ಕೆ.ಎನ್.ರವೀಂದ್ರ ಮಾತನಾಡಿದರು. ಸಾಗರ್ ಆಸ್ಪತ್ರೆ ಆಡಳಿತಾಧಿಕಾರಿ ಎಸ್.ರಮೇಶ್, ಪ್ರಗತಿ ಬ್ಯಾಂಕ್ ಶಾಖೆ ವ್ಯವಸ್ಥಾಪಕ ವೆಂಕಟಪ್ಪ, ಕಾರ್ಡಿಯೋಕೇರ್ ಜಿಲ್ಲಾಧ್ಯಕ್ಷ ಮುನಿಕೃಷ್ಣಪ್ಪ, ತಾಲ್ಲೂಕು ಲಯನ್ಸ್ ಕ್ಲಬ್ ಅಧ್ಯಕ್ಷೆ ಲಕ್ಷ್ಮೀಕಾಂತಮ್ಮ, ಪದಾಧಿಕಾರಿಗಳಾದ ರಾಘವೇಂದ್ರ, ಜಿ.ವಿ.ರಾಜಗೋಪಾಲ್, ಜಿ.ಲಕ್ಷ್ಮೀಪತಿ, ಕೆ.ಟಿ.ನಂಜುಂಡಪ್ಪ, ಆಶಾಜಯಪ್ಪ, ಎನ್.ನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.