ADVERTISEMENT

ರೋಲರ್ ಹಾಕಿ ಪಂದ್ಯಾವಳಿ : ಬೆಂಗಳೂರು ತಂಡಕ್ಕೆ ವೀರಾಗ್ರಣಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 7:45 IST
Last Updated 19 ಜೂನ್ 2012, 7:45 IST

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ರೋಲರ್-ಹಾಕಿ ಪಂದ್ಯಾವಳಿ ಭಾನುವಾರ ಕೊನೆಗೊಂಡಿತು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರಿದ ಬೆಂಗಳೂರು ತಂಡವು ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ನಡೆದ ಬಹುತೇಕ ಎಲ್ಲ ಪಂದ್ಯಗಳು ಕುತೂಹಲದಿಂದ ಕೂಡಿದ್ದವು. ಬಾಲಕರು ಮತ್ತು ಬಾಲಕಿಯರ ನಡುವೆ ನಡೆದ ಪ್ರತ್ಯೇಕ ಸ್ಪರ್ಧೆಗಳಲ್ಲಿ ವಿವಿಧ ತಂಡಗಳು ಬಹುಮಾನ ಗಳಿಸಿದವು.

ಹಾಕಿಪಟುಗಳ ಪೋಷಕರು ಮತ್ತು ಸ್ನೇಹಿತರು ಆಸಕ್ತಿಯಿಂದ ಪಂದ್ಯಗಳನ್ನು ವೀಕ್ಷಿಸಿದರು. ಶಿಳ್ಳೆ ಮತ್ತು ಚಪ್ಪಾಳೆ ಮೂಲಕ ಹಾಕಿಪಟುಗಳನ್ನು ಪ್ರೋತ್ಸಾಹಿಸಿದರು. ಆಟಗಾರರ ಹೆಸರುಗಳನ್ನು ಕೂಗುವುದರ ಮೂಲಕ ಪ್ರತಿಯೊಬ್ಬರನ್ನು ಹುರಿದುಂಬಿಸಿದರು. ಈ ಪಂದ್ಯಾವಳಿಯು ಇಲ್ಲಿನ ಜನರಿಗೆ ಹೊಸ ಅನುಭವ ನೀಡಿತು.

`ರಾಜ್ಯದೆಲ್ಲೆಡೆ ರೋಲರ್-ಹಾಕಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಈ ಉದ್ದೇಶದಿಂದಲೇ ಬೆಂಗಳೂರಿಗೆ ಮಾತ್ರ ಸೀಮಿಗೊಳ್ಳದೆ ಜಿಲ್ಲಾಮಟ್ಟದಲ್ಲಿ ಹಾಕಿ ಪಂದ್ಯಾವಳಿ ನಡೆಸುತ್ತಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ಉತ್ತಮ ಸ್ಕೇಟಿಂಗ್ ರಿಂಗ್ ಇದ್ದು, ಹಾಕಿಪಟುಗಳು ಇದ್ದಾರೆ. ಮುಂದಿನ ದಿನಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ರೋಲರ್ ಹಾಕಿ ಸ್ಪರ್ಧೆ ನಡೆಸುತ್ತೇವೆ. ರೋಲರ್ ಹಾಕಿಯನ್ನು ಪ್ರೋತ್ಸಾಹಿಸುವಂತೆ ಮತ್ತು ಅಗತ್ಯ ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕೋರಿದ್ದೇವೆ~ ಎಂದು ರಾಜ್ಯ ರೋಲರ್ ಹಾಕಿ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಕೆ.ಭರತ್‌ಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಸರ್ಕಲ್ ಇನ್ಸ್‌ಪೆಕ್ಟರ್ ಎಸ್.ಮಹೇಶ್‌ಕುಮಾರ್ ಬಹುಮಾನ ವಿತರಿಸಿದರು. ಕೆ.ವಿ.ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ವಿ.ನವೀನ್‌ಕಿರಣ್, ರೋಲರ್ ಹಾಕಿ ಅಸೋಸಿಯೇಷನ್ ಅಧ್ಯಕ್ಷ ಜಬೀಉಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.