ADVERTISEMENT

ವಿಜ್ಞಾನ-ಸಾಹಿತ್ಯ: ನಿಲ್ಲದ ಸಂಘರ್ಷ

ತಾಲ್ಲೂಕು ಸಾಹಿತ್ಯ ಸಮ್ಮೇಳನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 10:28 IST
Last Updated 14 ಜೂನ್ 2013, 10:28 IST

ಮುಳಬಾಗಲು: ವಿಜ್ಞಾನ, ಸಾಹಿತ್ಯ ಮತ್ತು ಧರ್ಮಗಳ ನಡುವೆ ನಿರಂತರ ಸಂಘರ್ಷ ನಡೆದೇ ಇದೆ ಎಂದು ಲೇಖಕ ಡಾ.ಜೆ.ಬಾಲಕೃಷ್ಣ ನುಡಿದರು.

ಪಟ್ಟಣದ ಉತ್ತನೂರು ರಾಜಮ್ಮ ವೇದಿಕೆಯಲ್ಲಿ ಗುರುವಾರ ಮುಕ್ತಾಯವಾದ ತಾಲ್ಲೂಕು ಮಟ್ಟದ 2ನೇ ಸಾಹಿತ್ಯ ಸಮ್ಮೇಳನದಲ್ಲಿ  ಸಮಾರೋಪ ಭಾಷಣ ಮಾಡಿದ ಅವರು, ವಿಜ್ಞಾನ, ಧರ್ಮ ಮತ್ತು ಸಾಹಿತ್ಯಗಳ ನಡುವಿನ ಸಂಘರ್ಷದ್ದೇ ಒಂದು ಪ್ರತ್ಯೇಕ ಚರಿತ್ರೆಯನ್ನೇ ದಾಖಲಿಸಬಹುದು. ವಿಜ್ಞಾನ ಮತ್ತು ಧರ್ಮ ಪ್ರತಿಪಾದಕರ ನಡುವಿನ ಸಂಘರ್ಷ ಪ್ರಪಂಚದ ಚರಿತ್ರೆಯ ಮುಖ್ಯ ಅಂಶಗಳಲ್ಲೊಂದು ಎಂದರು.

ವಿಜ್ಞಾನ ಮತ್ತು ಧರ್ಮಗಳ ತಾತ್ವಿಕ ಪ್ರತಿಪಾದನೆಗಳ ಪರಿಣಾಮವಾಗಿ ಪಶ್ಚಿಮ ದೇಶಗಳಲ್ಲಿ ದೊಡ್ಡ ಸಂಘರ್ಷವೇ ನಡೆಯಿತು. ವಿಜ್ಞಾನ ಮತ್ತು ಧರ್ಮ ಎಂದಿಗೂ ಒಂದಾಗಲಾರದು ಎಂದರು.

1961 ಅಮೆರಿಕಾದಲ್ಲಿ ನಡೆದ ಒಂದು ಸಂವಾದದ ಕಾರಣವಾಗಿ ಕೀಟನಾಶಕಗಳ ಬಳಕೆ ಅಮೇರಿಕಾದಲ್ಲಿ ಕಡಿಮೆಯಾಯಿತು. ಒಂದು ವಸ್ತುವಿನ ರಾಸಾಯನಿಕ ಹಾಗೂ ಪ್ರಾಕೃತಿಕ ಅಂಶಗಳನ್ನು ವಿಜ್ಞಾನ ಪರಿಗಣಿಸಿದರೆ, ಸಾಹಿತ್ಯವು ಆಸ್ವಾದನೆಯ ನೆಲೆಯಲ್ಲಿ ಪರಿಗಣಿಸುತ್ತದೆ. ವಿಜ್ಞಾನಿಗಳಿಗೆ ಸಾಹಿತಿಯ ದೃಷ್ಟಿಕೋನ ಮತ್ತು ಸಾಹಿತಿಗಳಿಗೆ ವಿಜ್ಞಾನಿಯ ದೃಷ್ಟಿಕೋನಗಳಿದ್ದರೆ ಸಮಾಜಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಂದರು.

ಕೆ.ಪಿ.ಪೂರ್ಣಚಂದ್ರತೇಜಸ್ವಿ, ಕೆ.ಎನ್.ಗಣೇಶಯ್ಯ ಮತ್ತಿತರ ಲೇಖಕರು ವಿಜ್ಞಾನ ಮತ್ತು ಸಾಹಿತ್ಯವನ್ನು ಬೆಸೆದು ಜಗತ್ತನ್ನು ವಿಶ್ಲೇಷಿಸಿದ ಅಪರೂಪದ ಲೇಖಕರು ಎಂದು ಉಲ್ಲೇಖಿಸಿದರು.

ಇದೇ ಸಂದರ್ಭಧಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಎಸ್.ಹರಿಕೃಷ್ಣ, ರಮಾದೇವಿ ಉತ್ತನೂರು, ಮೋತಕಪಲ್ಲಿ ರತ್ನಮ್ಮ, ಬಾಲಪ್ಪ, ನಾ.ಜಗದೀಶ್, ಕನ್ನಡಭಟ ವೆಂಕಟಪ್ಪ, ಡಾ.ಕೆ.ಆರ್.ಮನು, ಚಾಂದ್‌ಪಾಷಾ, ಎನ್.ವೆಂಕಟರವಣಪ್ಪ, ಪ್ರಕಾಶ್ ಮತ್ತು ಕೆ.ಓ.ಮಂಜುಳಾ ಅವರನ್ನು ಸನ್ಮಾನಿಸಲಾಯಿತು.

ಸಮ್ಮೇಳನಾಧ್ಯಕ್ಷ ಎಚ್.ಎ.ಪುರುಷೋತ್ತಮರಾವ್, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜೆ.ನಾಗರಾಜ್. ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಜಿ.ಶಿವಪ್ಪ, ಜಿಲ್ಲಾ ಪ್ರತಿನಿಧಿ ಆರ್.ಎಸ್.ಕೃಷ್ಣಯ್ಯಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಯು.ವಿ.ನಾರಾಯಣಾಚಾರ್, ಕನ್ನಡ ಭಟ ವೆಂಕಟಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಎನ್.ರಾಜ್‌ಕುಮಾರ್, ಎಂ.ವಿ.ಜನಾರ್ದನ್, ಪದ್ಮನಾಭರಾವ್, ಜೆಮಿನಿ ರಮೇಶ್, ಶಂಕರ್‌ಕೇಸರಿ ಭಾಗವಹಿಸಿದ್ದರು.

ಸಮಾರೋಪಕ್ಕೂ ಮುನ್ನ ನಡೆದ ಭೂಮಿ ತಾಯಿಯ ತತ್ವ-ಒಂದು ಮರುಚಿಂತನೆ ಗೋಷ್ಠಿಯಲ್ಲಿ ಲೇಖಕ ನಟರಾಜ್ ಭೂದಾಳ್ ಅಧ್ಯಕ್ಷತೆ ವಹಿಸಿದ್ದರು. ಹಸಿರು ಓದು: ವಿಚಾರ ಸಾಹಿತ್ಯ ಹಿನ್ನಲೆಯಲ್ಲಿ ಪ್ರಮೋದ್ ತುರುವಿಹಾಳ್,  ಹಸಿರು ವಿಮರ್ಶೆ: ಸಾಹಿತ್ಯ ವಿಮರ್ಶೆಯ ಹಿನ್ನೆಲೆಯಲ್ಲಿ ಬಿ.ಸಿ. ನಾಗೇಂದ್ರಕುಮಾರ್ ಮತ್ತು ಹಸಿರು ತತ್ವಜ್ಞಾನ ಕುರಿತು ಕೆ.ಸಿ.ರಘು ವಿಚಾರ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.