ADVERTISEMENT

ಶಾಶ್ವತ ಮೂಲ ಸೌಕರ್ಯ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 7:15 IST
Last Updated 19 ಜನವರಿ 2011, 7:15 IST

ಬಾಗೇಪಲ್ಲಿ: ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಬಾಗೇಪಲ್ಲಿ ಕಸಬಾ ಪಂಚಾಯಿತಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ಬಿ.ಸಾವಿತ್ರಮ್ಮರವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮೂಲಸೌಕರ್ಯ ಪೂರೈಕೆಗೆ ಶಾಶ್ವತವಾದ ಕಾರ್ಯಯೋಜನೆಗಳನ್ನು ರೂಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ. ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮತ್ತು ಪಕ್ಷದ ಮುಖಂಡರ ಮಾರ್ಗರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಜನಪರ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಯಾವುದೇ ಕಾರಣಕ್ಕೂ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದೇ ಜನಸಾಮಾನ್ಯರಿಗೆ ಉಪಯುಕ್ತ ಆಗುವಂತಹ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ತಿಳಿಸಿದ್ದಾರೆ.

ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುಮಾಸ್ತರಾಗಿರುವ ಮುನಿಸ್ವಾಮಿಯವರ ಪತ್ನಿ ಬಿ.ಸಾವಿತ್ರಮ್ಮ ಅವರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವುದು ಬಹುತೇಕ ಖಚಿತವಾಗಿದೆ. ಭವಿಷ್ಯದಲ್ಲಿ ಕೈಗೊಳ್ಳಲಾಗುವ ಯೋಜನೆಗಳ ಕುರಿತು ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
* ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿಯಲ್ಲಿ ಉಪಾಧ್ಯಕ್ಷರಾಗಿ ನೀವು ಕಾರ್ಯನಿರ್ವಹಿಸಲಿದ್ದು, ಜಿಲ್ಲೆಯನ್ನು ಯಾವ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತೀರಿ?
ಬಿ.ಸಾವಿತ್ರಮ್ಮ: ಗ್ರಾಮಾಂತರ ಪ್ರದೇಶದಲ್ಲಿನ ಕೃಷಿ ಕೂಲಿಕಾರ್ಮಿಕರು ಹಲವು ಸಮಸ್ಯೆ-ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗುತ್ತಿದ್ದಾರೆ. ಅವರ ಜೀವನಮಟ್ಟ ಸುಧಾರಿಸಲು ಪ್ರಥಮ ಆದ್ಯತೆ ನೀಡಲಾಗುವುದು. ಅವರ ಬವಣೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜನರಿಗೆ ಪ್ರಯೋಜನವಾಗಬಲ್ಲ ಶಾಶ್ವತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಥಮ ಪ್ರಾಶಸ್ತ್ಯ ನೀಡಲಾಗುವುದು. ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿ ಸ್ಥಳದಲ್ಲೇ ಪರಿಹರಿಸಲು ಒತ್ತು ಕೊಡಲಾಗುವುದು.

* ಕ್ಷೇತ್ರದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳಿವೆ. ನಿಮ್ಮ ಪರಿಹಾರದ ಕ್ರಮಗಳಾವುವು?
ಬಿ.ಸಾವಿತ್ರಮ್ಮ: ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಲು ರಸ್ತೆಗಳು ಇಲ್ಲ. ಕಾರ್ಯಯೋಜನೆಯ ರಸ್ತೆಗಳು ತೀರಾ ಕಳಪೆ ಮಟ್ಟದಾಗಿದೆ. ಕುಡಿಯುವ ನೀರು, ವಿದ್ಯುತ್ ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸಿ, ಗ್ರಾಮಸ್ಥರಿಗೆ ಅನುಕೂಲ ಮಾಡಲಾಗುವುದು. ಸಮಸ್ಯೆಗಳ ಬಗ್ಗೆ ನಾನೇ ಖುದ್ದು ಪರಿಶೀಲಿಸಿ ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿದ ಮತದಾರರ ಕಲ್ಯಾಣಕ್ಕೆ ಶ್ರಮಿಸುತ್ತೇನೆ.

* ಜಿಲ್ಲೆಯಲ್ಲಿ ಕಾಡುತ್ತಿರುವ ಅಂತರ್ಜಲ ಹಾಗೂ ಶಾಶ್ವತ ನೀರಾವರಿ ಸಮಸ್ಯೆ ಪರಿಹಾರಕ್ಕೆ ನೀವು ಕೈಗೊಳ್ಳುವ ಕ್ರಮಗಳೇನು?
ಬಿ.ಸಾವಿತ್ರಮ್ಮ: ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಮೂಲ ಇಲ್ಲದ ಕಾರಣ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಜನರು ನೀರಿಗಾಗಿ ಹಲವು ಬಾರಿ ಹೋರಾಟ ಕೂಡ ನಡೆಸಿದ್ದಾರೆ. ಅಂತರ್ಜಲ ಸಮಸ್ಯೆ ನಿವಾರಣೆ ಮತ್ತು ಶಾಶ್ವತ ನೀರಾವರಿ ಯೋಜನೆಗಾಗಿ ಕೈಗೊಳ್ಳುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಲಾಗುವುದು. ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.

* ಗ್ರಾಮೀಣಾಭಿವೃದ್ಧಿ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ನೀವು ಗ್ರಾಮಸ್ಥರಲ್ಲಿ ಹೇಗೆ ಜಾಗೃತಿ ಮೂಡಿಸಲಿದ್ದೀರಿ?
ಬಿ.ಸಾವಿತ್ರಮ್ಮ: ಸ್ವಚ್ಚತಾ ಗ್ರಾಮ ಯೋಜನೆಯಡಿಯಲ್ಲಿ ಪ್ರತಿಯೊಂದು ಮನೆಗೂ ಭೇಟಿ ನೀಡಿ ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುವುದು. ತ್ಯಾಜ್ಯ ವಿಲೇವಾರಿಯ ಬಗ್ಗೆ ಅರಿವುಮೂಡಿಸಲಾಗುವುದು. ರಾಜಕೀಯ ಹೊರತುಪಡಿಸಿ ಎಲ್ಲಾ ನಾಯಕ ಹಾಗೂ ಗ್ರಾಮಸ್ಥರೊಡನೆ ಚರ್ಚಿಸಿ ಪ್ರಾಮಾಣಿಕ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳುತ್ತೇನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.