ADVERTISEMENT

ಸಂಜೆಗೆಂಪಿನಲ್ಲಿ ಮೋಹಕ ನೇಸರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:40 IST
Last Updated 18 ಜೂನ್ 2011, 6:40 IST
ಸಂಜೆಗೆಂಪಿನಲ್ಲಿ ಮೋಹಕ ನೇಸರ
ಸಂಜೆಗೆಂಪಿನಲ್ಲಿ ಮೋಹಕ ನೇಸರ   

ಚಿಕ್ಕಬಳ್ಳಾಪುರ: ದೂರದಲ್ಲಿ ಸೂರ್ಯ ಕೈಬೀಸಿ `ನಿರ್ಗಮಿಸುವೆ~ ಎಂದು ಸೂಕ್ಷ್ಮವಾಗಿ ಹೇಳುತ್ತ ಆಗಸದಲ್ಲಿ ಕರಗಿ ಹೋದಂತೆ, ಚಿಲಿಚಿಲಿ ಎನ್ನುತ್ತ ಹಕ್ಕಿಗಳು ವೇಗವಾಗಿ ಗೂಡುಗಳತ್ತ ಹಾರುತ್ತಿರುವಂತೆ, ಇಡೀ ದಿನದ ಆಯಾಸ, ಸುಸ್ತು ನಿಧಾನವಾಗಿ ಕಣ್ಮರೆಯಾಗುತ್ತಿರುವಂತೆ....ಆಕಾಶದಲ್ಲಿ ಸುಂದರ ಚಿತ್ತಾರ ಮೂಡಿ ಬರುತ್ತದೆ.

ಕವಿಯೊಬ್ಬನ ಕಲ್ಪನೆಯಂತೆ ಕಲಾವಿದನೊಬ್ಬ ಬಣ್ಣಗಳನ್ನು ಹುಡುಕಿ ಹೆಕ್ಕಿ ಚಿತ್ರ ತೆಗೆದಂತೆ ಕಂಡು ಬರುವ ಈ ದೃಶ್ಯ ಒಂದೆರಡು ದಿನಕ್ಕೆ ಮಾತ್ರವೇ ಸೀಮಿತವಲ್ಲ. ಸೂರ್ಯ ಮುಳುಗುವ ಮತ್ತು ಹಕ್ಕಿಗಳು ಗೂಡು ಸೇರುವ ಹೊತ್ತಿಗೆ ಪ್ರತಿದಿನ ಬಗೆಬಗೆಯ ಬಣ್ಣಗಳಿಂದ ಆಕಾಶ ಸಿಂಗಾರಗೊಳ್ಳುತ್ತದೆ.

ಶಿಡ್ಲಘಟ್ಟದ ಅಗಸದಲ್ಲಿ ಮೂಡಿರುವ ಈ ಚಿತ್ತಾರ ಬಣ್ಣಗಳ ಪರಿಕಲ್ಪನೆಯನ್ನೇ ತೆರೆದಿಡುತ್ತದೆ. ಅತ್ತ ಸಂಪೂರ್ಣ ಕೆಂಪು ಅಲ್ಲ, ಇತ್ತ ಕೇಸರಿಯು ಅಲ್ಲದ ಬಣ್ಣಗಳಲ್ಲಿ ಆಕಾಶ ಇನ್ನೂ ಸೊಗಸಾಗಿ ಕಾಣುವುದಲ್ಲದೇ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.

ಬೇಸಿಗೆಗಾಲ ಕಳೆದು ಮಳೆಗಾಲ ಬಂದಿದ್ದು, ಸಂಜೆ ವೇಳೆ ಆಕಾಶ ಇನ್ನಷ್ಟು ಸುಂದರ ಕಾಣವುದಲ್ಲದೇ ನಿಧಾನವಾಗಿ ಚಳಿಯು ಆವರಿಸತೊಡಗಿದೆ. ಮೋಡ ಕವಿದ ವಾತಾವರಣವಿದ್ದರೂ ಕೆಲವೊಮ್ಮೆ ಮಳೆಯಾಗುವುದಿಲ್ಲ. ಆದರೆ ಚಳಿ ಮಾತ್ರ ತನ್ನ ಹಿಡಿತವನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.

ನಗರಪ್ರದೇಶದಲ್ಲಿ ಈ ರೀತಿಯ ವಾತಾವರಣವಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಬೇರೆಯದ್ದೇ ಸ್ಥಿತಿಯಿದೆ. ರೈತರು ಸೂರ್ಯ ಉದಯಿಸುವ ಮುನ್ನವೇ ಹೊಲಗದ್ದೆಗಳತ್ತ ತೆರಳುತ್ತಿದ್ದಾರೆ.

`ಮೇ ಅಂತ್ಯ ಮತ್ತು ಜೂನ್ ಆರಂಭದಲ್ಲಿ ಕೆಲ ಕಡೆ ಭಾರಿ ಮಳೆಯಾಯಿತು. ಕಳೆದ ಸಲದಂತೆ ಈ ಸಲವೂ ಭಾರಿ ಮಳೆ ಬರುತ್ತದೆ ಎಂದು ನಿರೀಕ್ಷಿಸಿದ್ದೇವೆ. ರಾಗಿ, ಭತ್ತ, ಮುಸುಕಿನ ಜೋಳ, ತೊಗರಿ, ನೆಲಗಡಲೆ ಬಿತ್ತನೆ ಬೀಜಗಳನ್ನು ಈಗಾಗಲೇ ರೈತ ಸಂಪರ್ಕ ಕೇಂದ್ರ ಮತ್ತು ಇತರ ಕಡೆ ಪೂರೈಸಲಾಗಿದೆ. ರಸಗೊಬ್ಬರ ಅಗತ್ಯವಿರುವಷ್ಟು ಸಂಗ್ರಹಿಸಲಾಗಿದೆ  ಎನ್ನುತ್ತಾರೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎ.ಸಿ.ನಟರಾಜ್ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT