ADVERTISEMENT

ಸದ್ಬಳಕೆಯಾಗದ ನಗರದ ಪ್ರಮುಖ ಸ್ಥಳಗಳು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2011, 9:45 IST
Last Updated 31 ಅಕ್ಟೋಬರ್ 2011, 9:45 IST
ಸದ್ಬಳಕೆಯಾಗದ ನಗರದ ಪ್ರಮುಖ ಸ್ಥಳಗಳು
ಸದ್ಬಳಕೆಯಾಗದ ನಗರದ ಪ್ರಮುಖ ಸ್ಥಳಗಳು   

ಚಿಕ್ಕಬಳ್ಳಾಪುರ: ಕಳೆದ ವರ್ಷ ಅಕ್ಟೋಬರ್-ನವೆಂಬರ್ ತಿಂಗಳ ಆಸುಪಾಸಿನಲ್ಲಿ ಜಿಲ್ಲಾಡಳಿತವು ಒಂದೆಡೆ ಸುಪ್ರೀಂ ಕೋರ್ಟ್ ಆದೇಶ ಪಾಲಿಸುವ ತರಾತುರಿಯಲ್ಲಿದ್ದರೆ, ಮತ್ತೊಂದೆಡೆ ದೇವಾಲಯ ಮತ್ತು ಅಶ್ವತ್ಥಕಟ್ಟೆಗಳ ಅರ್ಚಕರು ಆತಂಕಮಯ ಕ್ಷಣಗಳನ್ನು ಎದುರಿಸುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಪ್ರಾರ್ಥನಾ ಕೇಂದ್ರಗಳನ್ನು ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ ಎಂದು ಜಿಲ್ಲಾಡಳಿತ ಹೇಳಿತ್ತು. ಪ್ರಾರ್ಥನಾ ಕೇಂದ್ರಗಳನ್ನು ತೆರವುಗೊಳಿಸದೇ ಅವುಗಳನ್ನು ರಕ್ಷಿಸಬೇಕು ಎಂದು ಅರ್ಚಕರು ಸೇರಿದಂತೆ ನಗರದ ಪ್ರಮುಖರು ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಿದ್ದರು.

ತೀವ್ರ ವಿರೋಧ ಮತ್ತು ಅಪಸ್ವರದ ನಡುವೆ ನಗರದ ಬಿ.ಬಿ.ರಸ್ತೆಯಲ್ಲಿದ್ದ ಬಲಮುರಿ ಗಣಪತಿ ದೇವಾಲಯವನ್ನು ತೆರವುಗೊಳಿಸಲಾಯಿತು. ಬಳಿಕ ಬಿ.ಬಿ.ರಸ್ತೆ, ಎಂ.ಜಿ.ರಸ್ತೆ,ಶಿಡ್ಲಘಟ್ಟ ರಸ್ತೆ ಸೇರಿದಂತೆ ಇತರ ರಸ್ತೆಗಳ ಬದಿಯಲ್ಲಿದ್ದ ಪ್ರಾರ್ಥನಾ ಕೇಂದ್ರಗಳನ್ನು, ಅಶ್ವತ್ಥ್‌ಕಟ್ಟೆಗಳನ್ನು ಮತ್ತು ನಾಗರಕಟ್ಟೆಗಳನ್ನು ತೆರವುಗೊಳಿಸಲಾಯಿತು. ಅವುಗಳ ಜೊತೆಗೆ ನೂರಾರು ವರ್ಷಗಳಿಂದ ನೆರಳು ನೀಡುತ್ತಿದ್ದ ಹೆಮ್ಮರಗಳನ್ನು ಕಡಿಯಲಾಯಿತು. ತೆರವುಗೊಂಡ ಸ್ಥಳವನ್ನು ಸದ್ಬಳಕೆ ಮಾಡಲಾಗುವುದು ಎಂದು ಜಿಲ್ಲಾಡಳಿತ ಭರವಸೆ ಕೂಡ ನೀಡಿತ್ತು.

ಆದರೆ ಒಂದು ವರ್ಷ ಸಮೀಪಿಸಿದರೂ ತೆರವುಗೊಂಡ ಸ್ಥಳದಲ್ಲಿ ಯಾವುದೇ ಬದಲಾವಣೆಯೂ ಕಂಡು ಬಂದಿಲ್ಲ. ಆಯಾ ಸ್ಥಳಗಳು ಪಾಳು ಬಿದ್ದಿದ್ದು, ಕೆಸರಿನಿಂದ ಆವರಿಸಿಕೊಂಡಿದೆ. ಕೆಲ ಸ್ಥಳಗಳನ್ನು ವ್ಯಾಪಾರಸ್ಥರು ಮತ್ತು ಇತರರು ಆಕ್ರಮಿಸಿಕೊಂಡಿದ್ದರೆ, ಇನ್ನೂ ಕೆಲ ಕಡೆ ಮರಗಳ ಬುಡ್ಡೆಯನ್ನೇ ಸರಿಯಾಗಿ ತೆರವುಗೊಳಿಸಲಾಗಿಲ್ಲ.

ಕಡಿದ ಮರಗಳ ಬುಡ್ಡೆಯಲ್ಲೇ ಹಸಿರೆಲೆಗಳು ಚಿಗುರುತ್ತಿದ್ದು, ಮತ್ತೆ ಜೀವಿಸಲು, ಬೆಳೆಯಲು ಹಾತೊರೆಯುತ್ತಿವೆ. ಸುತ್ತಮುತ್ತಲಿನ ಕೆಸರು ನಡುವೆಯೇ ಅವು ಚಿಗುರುತ್ತಿವೆ.

`ಜಿಲ್ಲಾಡಳಿತದ ಅಧಿಕಾರಿಗಳು ಪ್ರಾರ್ಥನಾ ಕೇಂದ್ರಗಳನ್ನು ತೆರವುಗೊಳಿಸಲು ಮುಂದಾದಾಗ ಕೆಲ ಮುಖಂಡರು ಮತ್ತು ಸಂಘಸಂಸ್ಥೆಗಳ ಪ್ರತಿನಿಧಿಗಳು ಅಶ್ವತ್ಥ್‌ಕಟ್ಟೆಗಳನ್ನು ಮತ್ತು ನಾಗರಕಟ್ಟೆಗಳನ್ನು ಪೂಜಿಸಿದರು. ಭಾರಿ ಸುರಕ್ಷತೆ ಮತ್ತು ಭದ್ರತೆಯೊಂದಿಗೆ ದೇವರಮೂರ್ತಿಗಳನ್ನು, ಅಶ್ವತ್ಥ್‌ಕಟ್ಟೆಗಳನ್ನು ಹೊತ್ತು ಒಯ್ದುರು. ಶೀಘ್ರವೇ ನೂತನ ಸ್ಥಳದಲ್ಲಿ ಪ್ರತಿಷ್ಠಾಪಿಸುವುದಾಗಿ ಹೇಳಿಕೊಂಡರು. ಆದರೆ ಅವುಗಳ ಜೊತೆ ಹೆಮ್ಮರಗಳನ್ನು ಕಡಿಯುತ್ತಿರುವ ಬಗ್ಗೆ ಯಾರೂ ಸಹ ವಿರೋಧ ವ್ಯಕ್ತಪಡಿಸಲಿಲ್ಲ. ಪ್ರಾರ್ಥನಾ ಕೇಂದ್ರಗಳನ್ನು ಮತ್ತು ದೇವರ ಮೂರ್ತಿಗಳನ್ನು ತೆರವುಗೊಳಿಸಿದರೆ ಸಾಕು, ಮರಗಳನ್ನು ಯಾಕೆ ಕಡಿಯಬೇಕು ಎಂದು ಒಬ್ಬರು ಪ್ರಶ್ನಿಸಲಿಲ್ಲ.

ನರಳು ನೀಡುತ್ತಿದ್ದ ಮರಗಳ ಬುಡ್ಡೆಗಳು ಬರಡಾಗಿ ನಿಂತಿವೆ~ ಎಂದು ಸರ್ಕಾರಿ ಇಲಾಖೆಯೊಂದರ ನಿವೃತ್ತ ಉದ್ಯೋಗಿ ನರಸಿಂಹಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

`ದೇಗುಲಗಳನ್ನು ತೆರವುಗೊಳಿಸಿದ ಪಾಪ ಮತ್ತು ಅನಿಷ್ಠ ತಮಗೆ ತಟ್ಟುತ್ತದೆ ಎಂದು ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ಕೆಲ ಅಧಿಕಾರಿಗಳು ತೆರವು ಕಾರ್ಯಾಚರಣೆ ನಂತರ ಧಾರ್ಮಿಕ ಯಾತ್ರೆ ಕೈಗೊಂಡರು.

ಪವಿತ್ರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ದೇವರಲ್ಲಿ ಕ್ಷಮೆಯಾಚಿಸಿದರು. ದೇವರಲ್ಲಿ ಅವರಿಗಿದ್ದ ಭಯಭಕ್ತಿ ಪರಿಸರ ಕಾಳಜಿ ಬಗ್ಗೆ ಇರಲಿಲ್ಲ. ಬೇಸಿಗೆಗಾಲ ಮತ್ತು ಸಂಜೆ ಹೊತ್ತಿನಲ್ಲಿ ವೃದ್ಧರು ಸೇರಿದಂತೆ ಮಕ್ಕಳು ಹೆಮ್ಮರಗಳ ಆಶ್ರಯದಲ್ಲಿ ಕೂತು ಹರಟೆ ಹೊಡೆಯುತ್ತಿದ್ದರು. ಆಟವನ್ನಾಡುತ್ತಿದ್ದರು. ಆದರೆ ಈಗ ಎಲ್ಲವೂ ಕಣ್ಮರೆಯಾಗಿದೆ~ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭಾರಿ ತರಾತುರಿಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಜಿಲ್ಲಾಡಳಿತವು ಇನ್ನೂ ಕೆಲ ಕಡೆ ಕಾರ್ಯಾಚರಣೆಯನ್ನೇ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ. ನಗರದ ಎಂ.ಜಿ.ರಸ್ತೆ, ಬಿ.ಬಿ.ರಸ್ತೆಯ ಹೊರವಲಯದಲ್ಲಿ ಮತ್ತು ರೈಲ್ವೆ ಇಲಾಖೆ ಜಮೀನಿನ ವ್ಯಾಪ್ತಿಯಲ್ಲಿರುವ ಪ್ರಾರ್ಥನಾ ಕೇಂದ್ರಗಳನ್ನು ಇನ್ನೂವರೆಗೆ ತೆರವುಗೊಳಿಸಿಲ್ಲ. ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಸ್ಥಳವನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ದೇವಾಲಯಗಳ ತೆರವು ಕಾರ್ಯಾಚರಣೆಗೆ ತಾಲ್ಲೂಕು ಆಡಳಿತ ಮುಂದಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಕ್ರಮವನ್ನು ಹಿಂಪಡೆಯಿತು ಎಂದು ಸಾರ್ವಜನಿಕರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.