ADVERTISEMENT

ಸಮೀಕ್ಷೆ ನೆಪದಲ್ಲಿ ಆಸೆ-ಆಮಿಷ ?

ಬೆಂಗಳೂರಿನಿಂದ ಬಂದ ಯುವಕರು !

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 8:36 IST
Last Updated 23 ಏಪ್ರಿಲ್ 2013, 8:36 IST

ಚಿಕ್ಕಬಳ್ಳಾಪುರ: ಮದ್ಯ ಮತ್ತು ಹಣ ಹಂಚಿಕೆಯ ಮೇಲೆ ಸಂಪೂರ್ಣವಾಗಿ ನಿಗಾ ವಹಿಸಿರುವ ಚುನಾವಣಾ ಆಯೋಗವು ಜಿಲ್ಲಾ ಕೇಂದ್ರವಲ್ಲದೇ ತಾಲ್ಲೂಕು ಕೇಂದ್ರಗಳಲ್ಲೂ ಚೆಕ್‌ಪೋಸ್ಟ್‌ಗಳ ಮೇಲೆ ಕಣ್ಣು ನೆಟ್ಟಿದೆ.

ಅಬಕಾರಿ ಪೊಲೀಸರಲ್ಲದೇ ನಾಗರಿಕ ಸೇವಾ ಪೊಲೀಸರು ತಾಲ್ಲೂಕು, ಹೋಬಳಿ ಮತ್ತು ಗ್ರಾಮಗಳಲ್ಲಿ ಸುತ್ತುಗಳನ್ನು ಹಾಕುತ್ತಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದ್ದಾರೆ. ಆದರೆ ಇದರ ನಡುವೆಯೂ ಚುನಾವಣಾ ಕಣದಲ್ಲಿರುವ ಕೆಲ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಬಗೆಬಗೆಯ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ಅಭ್ಯರ್ಥಿಗಳು ರಂಗೋಲಿಯ ಕೆಳಗೆ ನುಸುಳಲು ಯತ್ನಿಸುತ್ತಿದ್ದಾರೆ !

ಕೆಲ ಕಡೆ ಮತದಾರರನ್ನು ನೇರವಾಗಿ ಭೇಟಿ ಮಾಡಲು ಸಾಧ್ಯವಾಗದ ಕಾರಣ ಅಭ್ಯರ್ಥಿಗಳು ಅಲ್ಲಲ್ಲಿ ತಮ್ಮ ಕಾರ್ಯಕರ್ತರನ್ನು ಮತ್ತು ಶಿಷ್ಯಂದಿರನ್ನು ಆಯಾ ಗ್ರಾಮಗಳಿಗೆ ಕಳುಹಿಸುತ್ತಿದ್ದಾರೆ. ಅಲ್ಲಿನ ಗ್ರಾಮಸ್ಥರ ಅನಿಸಿಕೆ, ಅಭಿಪ್ರಾಯಗಳನ್ನು ತೆಗೆದುಕೊಳ್ಳುವುದಲ್ಲದೇ ಮುಂದಿನ ದಿನಗಳಲ್ಲಿ ಅಲ್ಲಿನ ಜನರ ಮನೋಭಾವ ಬದಲಾಗುವ ಸಾಧ್ಯತೆ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆಯೂ ಸಮೀಕ್ಷೆ ನಡೆಸುತ್ತಿದ್ದಾರೆ. ಗ್ರಾಮಸ್ಥರು ನೀಡುವ ಅಭಿಪ್ರಾಯಗಳನ್ನು ಒಂದೆಡೆ ಸಂಗ್ರಹಿಸಿ, ವರದಿಯ ರೂಪದಲ್ಲಿ ತಮ್ಮ ಅಭ್ಯರ್ಥಿಗಳಿಗೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ.

ಈ ಸಮೀಕ್ಷೆ ಮತ್ತು ಗ್ರಾಮಸ್ಥರ ಅಭಿಪ್ರಾಯಗಳ ಸಂಗ್ರಹಣೆಗೆಂದೇ ಸ್ಥಳೀಯರನ್ನು ಅಲ್ಲದೇ ಬೆಂಗಳೂರಿನಿಂದಲೂ ಕೆಲ ಯುವಕರನ್ನು ಕರೆಯಿಸಿಕೊಳ್ಳಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಆಗಿರುವ ಕೆಲವಷ್ಟು ಯುವಕರು ಗ್ರಾಮೀಣ ಪ್ರದೇಶಕ್ಕೆ ತೆರಳಿ, ತಮ್ಮ ಅಭ್ಯರ್ಥಿಗಳ ಪರ ಮತಯಾಚಿಸುವುದಲ್ಲದೇ ಅಲ್ಲಿನ ಗ್ರಾಮಸ್ಥರ ಮನೋಭಾವ ಮತ್ತು ಯೋಚನಾಶಕ್ತಿಯನ್ನು ಗಮನಿಸುತ್ತಿದ್ದಾರೆ.

ಗ್ರಾಮಸ್ಥರು ಯಾರ ಪರ ಒಲವು ತೋರುತ್ತಾರೆ ಮತ್ತು ಅವರನ್ನು ಯಾವ ರೀತಿಯಲ್ಲಿ ತಮ್ಮ ಅಭ್ಯರ್ಥಿಯ ಪರ ಒಲವು ಬೆಳೆಸಿಕೊಳ್ಳುವಂತೆ ಮಾಡಬಹುದು ಎಂಬ ಆಲೋಚನೆಯನ್ನು ಸಹ ಅವರು ಮಾಡತ್ತಿದ್ದಾರೆ.

`ಚುನಾವಣೆ ಸಂದರ್ಭದಲ್ಲಿ ನಾನು ಈ ರೀತಿಯ ಬದಲಾವಣೆ ಮತ್ತು ಚಟುವಟಿಕೆಗಳು ನಡೆಯುತ್ತವೆಯೆಂದು ನಿರೀಕ್ಷಿಸಿರಲಿಲ್ಲ. ಇತ್ತೀಚೆಗೆ ಕೆಲವಷ್ಟು ಯುವಕರು ಇನಿಮಿಂಚೇನಹಳ್ಳಿ, ಬಯ್ಯಪ್ಪನಹಳ್ಳಿ, ರೆಡ್ಡಗೊಲ್ಲಾರಹಳ್ಳಿ, ಅರೂರು ಸುತ್ತಮುತ್ತ ಗ್ರಾಮಗಳಿಗೆ ಬಂದಿದ್ದರು. ನಮ್ಮ ಗ್ರಾಮಸ್ಥರೊಡನೆ ರಾಜಕೀಯ ವಿಷಯ ಚರ್ಚಿಸಿದರು.

ನಂತರ ಬಿಳಿ ಹಾಳೆಯೊಂದರಲ್ಲಿ ನಮ್ಮೆಲ್ಲರ ಹೆಸರು, ಮೊಬೈಲ್ ದೂರಾವಣಿ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಸಂಖ್ಯೆ ಬರೆದುಕೊಂಡರು. ಅದರ ಕೆಳಗೆ ನಾವು ಬೆಂಬಲಿಸುವ ಪಕ್ಷಗಳ ಹೆಸರುಗಳು ಇದ್ದವು. ಹಾಳೆ ಭರ್ತಿ ಮಾಡಿಕೊಂಡ ಅವರು ತಮ್ಮ ನಾಯಕರು ನಮ್ಮಂದಿಗೆ ಮಾತನಾಡುತ್ತಾರೆಂದು ಹೇಳಿ ಹೊರಟೇಬಿಟ್ಟರು' ಎಂದು ಗ್ರಾಮಸ್ಥ ನಾರಾಯಣಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ತಂತ್ರ: `ಯುವಕರು ಹೀಗೆ ಬಂದು ಹೋಗಿದ್ದರ ಹಿಂದೆ ಬೇರೆಯದ್ದೇ ತಂತ್ರವಿದೆ ಎಂಬುದು ನಂತರ ಗೊತ್ತಾಯಿತು. ಅವರ ಕಡೆಯ ನಾಯಕರು ನಾವು ನೀಡಿದ ಮೊಬೈಲ್ ದೂರವಾಣಿ ಸಂಖ್ಯೆಗೆ ಕರೆ ಮಾಡುತ್ತಾರೆ. ಹಣವಲ್ಲದೇ ಬೇರೆ ಬೇರೆ ರೀತಿಯ ಆಸೆ-ಆಮಿಷ ಒಡ್ಡುತ್ತಾರೆ. ಒಂದು ವೇಳೆ ನಾವು ಒಪ್ಪಿಬಿಟ್ಟರೆ, ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಇಂತಹ ಎಲ್ಲ ಅಕ್ರಮ ಚಟುವಟಿಕೆ ಮತ್ತು ಅವ್ಯವಹಾರ ಗೊತ್ತಿರದ ಕಾರಣ ನಾವು ಇದಕ್ಕೆ ಸುತಾರಾಂ ಒಪ್ಪಲಿಲ್ಲ. ಇನ್ನೊಮ್ಮೆ ನಮ್ಮ ಗ್ರಾಮಗಳಿಗೆ ಕಾಲಿಡಬೇಡಿ ಮತ್ತು ಆಸೆ-ಆಮಿಷ ಒಡ್ಡಬೇಡಿಯೆಂದು ಯುವಕರಿಗೆ ಎಚ್ಚರಿಕೆ ನೀಡಿದೆವು' ಎಂದು ಅವರು ಹೇಳಿದರು.

`ಚುನಾವಣಾ ಆಯೋಗವು ಬಾಹ್ಯವಾಗಿ ಹಲವಾರು ವಿಷಯಗಳ ಮೇಲೆ ತೀವ್ರ ನಿಗಾ ವಹಿಸಿದೆ. ಅಕ್ರಮ ಮದ್ಯ, ಬಟ್ಟೆ ಮತ್ತು ಇತರ ವಸ್ತುಗಳನ್ನು ವಶಪಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಚುನಾವಣಾ ಆಯೋಗದ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಗುಪ್ತ ಚಟುವಟಿಕೆಗಳ ಮೇಲೂ ನಿಗಾ ವಹಿಸಿದರೆ, ಇನ್ನೂ ಹೆಚ್ಚು ಅನುಕೂಲವಾಗುತ್ತದೆ.

ಗ್ರಾಮೀಣ ಪ್ರದೇಶದ ಮತದಾರರು ಇನ್ನೂ ಪೂರ್ಣಪ್ರಮಾಣದಲ್ಲಿ ಕಲುಷಿತಗೊಂಡಿಲ್ಲ. ಆಸೆ-ಆಮಿಷಕ್ಕೂ ಒಳಪಡುವುದಿಲ್ಲ. ಈ ಕಾರಣಕ್ಕಾಗಿಯೇ ಇಂತಹ ಅಕ್ರಮ ಬೆಳವಣಿಗೆಗೆ ಚುನಾವಣೆ ಆಯೋಗದ ಅಧಿಕಾರಿಗಳು ಕಡಿವಾಣ ಹಾಕಬೇಕು' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.