ADVERTISEMENT

ಸಮೃದ್ಧಿ ಗಣೇಶೋತ್ಸವಕ್ಕೆ ಅದ್ದೂರಿ ತೆರೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 9:10 IST
Last Updated 18 ಅಕ್ಟೋಬರ್ 2012, 9:10 IST

ಚಿಂತಾಮಣಿ:  ನಗರದ ಬೆಂಗಳೂರು ರಸ್ತೆಯಲ್ಲಿನ ಯಾದವ ವಿದ್ಯಾರ್ಥಿ ನಿಲಯದ ಬಳಿ ಕಳೆದ ಒಂದು ತಿಂಗಳಿನಿಂದ ಪ್ರತಿಷ್ಠಾಪಿಸಲಾಗಿದ್ದ ಸಮೃದ್ದಿ ಗಣೇಶೋತ್ಸವದ ಗಣೇಶಗಳನ್ನು  ಬುಧವಾರ ಸಂಜೆ ಕನಂಪಲ್ಲಿ ಓಟಿ ಕೆರೆಯಲ್ಲಿ ಭಕ್ತಿ, ಸಂಭ್ರಮದಿಂದ ಅದ್ದೂರಿಯಾಗಿ ವಿಸರ್ಜನೆ ಮಾಡಲಾಯಿತು.

ಬೆಂಗಳೂರು ರಸ್ತೆಯಲ್ಲಿನ ನಗರಸಭೆಯ ಓಟಿ ಕೆರೆಯ ಅಂಗಳದಲ್ಲಿ ಗಣೇಶನ ಮೂರ್ತಿಗಳಿಗೆ ವಿಶೇಷ ಪೂಜೆ, ಹೋಮ, ಹವನ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಸಂಘಟಕ ಸತ್ಯನಾರಾಯಣ ಮಹೇಶ್ ಅವರ ನೇತೃತ್ವದಲ್ಲಿ  ಶ್ರದ್ದಾಭಕ್ತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಗಣೇಶ ವಿಜರ್ಸನೆಗಾಗಿ ಆಗಮಿಸಿದ್ದ ಭಕ್ತರಿಗೆ ಉತ್ಸವದ ಸಂಘಟಕರು ಸ್ವಹಸ್ತದಿಂದ ಗಣಪತಿಗೆ ಅಭಿಷೇಕವನ್ನು ಮಾಡುವ ವ್ಯವಸ್ಥೆಯನ್ನು  ಕಲ್ಪಿಸಿಕೊಟ್ಟಿದ್ದರು. ಮೂರ್ತಿ ವಿಜರ್ಸನೆಗೆ ಸಾವಿರಾರು ಜನರು ಸಾಕ್ಷಿಯಾದರು. ಗಣಪತಿ ಮೂರ್ತಿಗಳ ವಿಸರ್ಜನಾ ಕಾರ್ಯಕ್ರಮ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಮದ್ಯೆ ಅದ್ದೂರಿಯಾಗಿ ನಡೆಯಿತು.

ವಿಜರ್ಸನೆಯ ವೀಕ್ಷಣೆಗೆ ನಗರ ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಿಂದ ನೂರಾರು ಜನರು ಆಗಮಿಸಿದ್ದರು. ಕೆರೆ ಕಟ್ಟೆಯ ತುಂಬ ಜನ ನಿಂತು ಗಣೇಶನ ವಿಗ್ರಹಗಳ ವಿಸರ್ಜನಾ ಕಾರ್ಯಕ್ರಮವನ್ನು ಭಕ್ತಿಭಾವದಿಂದ ವೀಕ್ಷಣೆ ಮಾಡಿದರು.

ಗಣೇಶೋತ್ಸವದ ವಿಸರ್ಜನೆ ಸವಿನೆನಪಿಗಾಗಿ ಉತ್ಸವದ ಸಂಘಟಕರು ಸ್ಥಳದಲ್ಲಿ ಗಣೇಶ ಜಾತ್ರೆ  ಏರ್ಪಡಿಸಿದ್ದರು.  ನಾಡಿನ ಸಾಂಸ್ಕೃತಿಕ ಗತ ವೈಭವ ಸಾರುವ ಡೊಳ್ಳು ಕುಣಿತ, ನಾದಸ್ವರ, ವೀರಗಾಸೆ, ಕೋಲಾಟ, ಪಂಡರಿ ಭಜನೆ ಸೇರಿದಂತೆ ಮತ್ತಿತರರ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಮೆಚ್ಚುಗೆ ಪಾತ್ರವಾದವು
ಕನ್ನಂಪಲ್ಲಿಯ ಓಟಿ ಕೆರೆಯ ಸುತ್ತಲೂ  ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.