ADVERTISEMENT

ಸಿಇಟಿ ಉಳಿಸಲು ವಿದ್ಯಾರ್ಥಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 10:16 IST
Last Updated 18 ಡಿಸೆಂಬರ್ 2013, 10:16 IST

ಚಿಕ್ಕಬಳ್ಳಾಪುರ: ಸಿಇಟಿ ಮೂಲಕವೇ ವೃತ್ತಿ ಶಿಕ್ಷಣ ಸೀಟ್‌ ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಬೇಕೆಂದು ಒತ್ತಾ­ಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಮಂಗಳ­ವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಹೆಸರಿನಲ್ಲಿ ಇಡೀ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿ­ಸಲು ಸರ್ಕಾರ ಹೊರಟಿದೆ. ಇದರಿಂದ ಉನ್ನತ ಶಿಕ್ಷಣದ ಕನಸು ಹೊತ್ತ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ದೂರಿದರು.

ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಶುಲ್ಕ ಹೆಚ್ಚಿಸುವುದರ ಜೊತೆಗೆ ಖಾಸಗಿ ಕಾಲೇಜ್‌ಗಳಿಗೆ  ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈಬಿಡಲು ಸರ್ಕಾರ ಮುಂದಾಗಿದೆ. ಇದು ಸರ್ಕಾರದ ಕಾಮೆಡ್‌–ಕೆ ಪರವಾದ ನಿಲುವನ್ನು ಪ್ರದರ್ಶಿಸುತ್ತದೆ ಎಂದು ಟೀಕಿಸಿದರು.

ಸಿಇಟಿ ಮೂಲಕವೇ ಸರ್ಕಾರಿ ವೃತ್ತಿ ಶಿಕ್ಷಣ ಸೀಟ್‌ ಹಂಚಿಕೆ ಮತ್ತು ಶುಲ್ಕ ನಿಗದಿ ಮಾಡಬೇಕು. ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು ಬಡ ವಿದ್ಯಾರ್ಥಿಗಳ ಕೈಗೆಟುಕುವಂತೆ ಪರಿ­ಷ್ಕರಿಸ­ಬೇಕು. ಸರ್ಕಾರಿ ಸೀಟ್‌ಗಳ ಸಂಖ್ಯೆ ಹೆಚ್ಚಿಸಬೇಕು. ಸರ್ಕಾರಿ ಕಾಲೇಜು­ಗಳಿಗೆ ಅಗತ್ಯ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರ ಉಳ್ಳವರ ಪರ ನೀತಿಗಳನ್ನು ರೂಪಿಸುವುದು ಕೈಬಿಟ್ಟು ಬಡವರ ಪರ ನೀತಿ ಜಾರಿಗೊಳಿಸಬೇಕು ಎಂದರು.
ನಗರದ ಶಾಂತಿನಿಕೇತನ ಕಾಲೇಜಿ­ನಿಂದ ಉಪವಿಭಾಗಾಧಿಕಾರಿ ಕಚೇರಿ­ವರೆಗೆ ಮೆರವಣಿಗೆ ನಡೆಸಲಾಯಿತು. ನಂತರ ಉಪವಿಭಾಗಾಧಿಕಾರಿ ಶಾಂತಲಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎಸ್‌ಎಫ್‌ಐ ಜಿಲ್ಲಾ ಘಟಕದ ಸಂಚಾಲಕ ಕುಂದಲಗುರ್ಕಿ ಮುನೀಂದ್ರ, ಬಾಬುರೆಡ್ಡಿ, ರಾಜಶೇಖರ, ರವಿ, ಶ್ಯಾಮಲಾ, ಗಿರೀಶ್‌, ನವೀನ್‌, ಸಂತೋಷ್‌ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.