ಬಾಗೇಪಲ್ಲಿ: ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತಿರುವ ನಿಡುಮಾಮಿಡಿ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಿಪಿಎಂ ಪಕ್ಷಕ್ಕೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಬೆಂಬಲ ನೀಡುತ್ತದೆ ಎಂದು ದಸಂಸ ತಾಲ್ಲೂಕು ಸಂಚಾಲಕ ಬಿ.ವಿ.ವೆಂಕಟರವಣ ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಮಡೆ ಮಡೆ ಸ್ನಾನದ ಆಚರಣೆ ವಿರುದ್ಧ ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರಗತಿ ಪರ ಸಂಘಟನೆಗಳು ಬೆಂಬಲ ನೀಡಬೇಕು. ಮೂಢನಂಬಿಕೆ ವಿರುದ್ಧ ಸಿಪಿಎಂನ ಎಲ್ಲ ಹೋರಾಟಗಳಿಗೆ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕ ಬೆಂಬಲ ನೀಡುತ್ತದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಘಟನಾ ಸಂಚಾಲಕ ಎ.ವಿ.ಲಕ್ಷ್ಮೀನರಸಿಂಹಪ್ಪ ಮಾತನಾಡಿ ‘ಚಿಕ್ಕಬಳ್ಳಾಪುರದಲ್ಲಿ ನಡೆದ ಮಡೆ ಮಡೆ ಸ್ನಾನದ ವಿರುದ್ಧ ಪ್ರತಿಭಟಿಸಿದ ಸಿಪಿಎಂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆಡಳಿತ ಮಂಡಳಿ ಸದಸ್ಯರನ್ನು ಕೂಡಲೇ ಬಂಧಿಸಬೇಕು. ಕೆಲ ಮಠಗಳು ತಮ್ಮ ಸ್ವಾರ್ಥಕ್ಕಾಗಿ ಮೂಢನಂಬಿಕೆ ಆಚರಣೆ ಮೂಲಕ ಸಮಾಜವನ್ನು ಅಂಧಕಾರಕ್ಕೆ ತಳ್ಳಲು ಹುನ್ನಾರ ನಡೆಸುತ್ತಿವೆ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಮಿತಿ ಮುಖಂಡ ಗಂಗುಲಪ್ಪ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ ಎಚ್.ಎನ್.ಗೋಪಿ, ಜಯಂತ್, ಎಲ್.ಎನ್.ನರಸಿಂಹಯ್ಯ, ಟಿ.ರವಿಕುಮಾರ್, ರಮಣ, ಪ್ರಕಾಶ್, ಕೆ.ಸಿ.ರವಣಪ್ಪ, ಕೋಟಪ್ಪ, ನರಸಿಂಹಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.