ADVERTISEMENT

ಹದ ಮಳೆ: ನಳನಳಿಸುವ ರಾಗಿ ಬೆಳೆ

ಮುಂಗಾರಿನಲ್ಲಿ ಶೇ 90ರಷ್ಟು ಬೆಳೆ ನಿರೀಕ್ಷೆ; ರೈತರ ಸಂಕಷ್ಟ ನಿವಾರಣೆಯ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 6:36 IST
Last Updated 5 ಅಕ್ಟೋಬರ್ 2017, 6:36 IST
ಹದ ಮಳೆ: ನಳನಳಿಸುವ ರಾಗಿ ಬೆಳೆ
ಹದ ಮಳೆ: ನಳನಳಿಸುವ ರಾಗಿ ಬೆಳೆ   

ಚಿಂತಾಮಣಿ: ತಾಲ್ಲೂಕಿನಲ್ಲಿ ಮುಂಗಾರು ಹಿನ್ನಡೆಯ ನಂತರ ಇದೀಗ ಹದವಾಗಿ ಮಳೆ ಸುರಿಯುತ್ತಿದೆ. ಎರಡು ವರ್ಷಗಳ ಬರಗಾಲದಿಂದ ಹೈರಾಣಾಗಿದ್ದ ರೈತರಲ್ಲಿ ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆ ಭರವಸೆ ಮೂಡಿಸಿದೆ.

ಜೂನ್ ಮತ್ತು ಜುಲೈನಲ್ಲಿ ಮಳೆ ಇಲ್ಲದೆ ಮತ್ತೆ ಬರಗಾಲದ ಛಾಯೆ ಆವರಿಸಿ ರೈತರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಬಿತ್ತನೆ ಕಾರ್ಯ ಸಂಪೂರ್ಣವಾಗಿ ಕುಂಠಿತವಾಗಿತ್ತು. ಬಿತ್ತನೆ ಇಲ್ಲದೆ ಎಲ್ಲೆಡೆ ಹೊಲಗಳು ಖಾಲಿಯಾಗಿದ್ದವು. ಹಸಿರು ಮಾಯವಾಗಿ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಎದುರಾಗಿತ್ತು. ಆದರೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗಿ, ಕೆರೆ ಕುಂಟೆಗಳಿಗೆ ನೀರು ಬರದಿದ್ದರೂ ಬೆಳೆಗಳಿಗೆ ಅಗತ್ಯವಿರುವಷ್ಟು ಹದವಾಗಿದೆ. ಬೆಳೆಗಳು ನಳನಳಿಸಲು ಕಾರಣವಾಗಿದೆ.

ಬಿತ್ತನೆ ಪ್ರದೇಶ: ತಾಲ್ಲೂಕಿನಲ್ಲಿ ಒಟ್ಟು 35918 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ 29734 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇ 83ರಷ್ಟು ಗುರಿ ಸಾಧನೆಯಾಗಿದ್ದು, ಮುಂಗಾರು ವಿಳಂಬವಾದರೂ ನಂತರ ಚೇತರಿಸಿಕೊಂಡು ಬೆಳೆಗಳು ಉತ್ತಮವಾಗಿವೆ. ಈಗಾಗಲೇ ರಾಗಿ ಬೆಳೆ ತೆನೆ ಬರುತ್ತಿದ್ದು ಶೇ 90ರಷ್ಟು ಬೆಳೆ ರೈತರ ಕೈಸೇರುವ ಭರವಸೆ ಇದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾರಾಯಣಸ್ವಾಮಿ ತಿಳಿಸಿದರು.

ADVERTISEMENT

ವಾಡಿಕೆಗಿಂತ ಹೆಚ್ಚು ಮಳೆ: 2017ರ ಜನವರಿ 1ರಿಂದ ಸೆಪ್ಟೆಂಬರ್‌ ಕೊನೆಯ ವರೆಗೆ ತಾಲ್ಲೂಕಿನಲ್ಲಿ 511 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ವಾಸ್ತವವಾಗಿ 564 ಮಿ.ಮೀ ಮಳೆಯಾಗಿದೆ. ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿ ಹದ ಮಳೆಯಾಗಿ, ಬೆಳೆಗಳಿಗೆ ಪೂರಕವಾಗಿದೆ. ಬೆಳೆ ಪೋಷಣೆಗೂ ಸಹಕಾರಿಯಾಗಿದೆ.

ರಾಗಿ, ಅವರೆ, ತೊಗರಿ, ಮುಸುಕಿನ ಜೋಳ ಬೆಳೆಗಳು ದಟ್ಟ ಹಸಿರಿನಿಂದ ಕಂಗೊಳಿಸುತ್ತಿವೆ. ರಾಗಿ 16,096 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಶೇಂಗಾ 6,308 ಹೆಕ್ಟೇರ್‌, ತೊಗರಿ 1,571 ಹೆಕ್ಟೇರ್‌, ಅವರೆ 1,130 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಂಗಾರು ವೈಫಲ್ಯದಿಂದ ಶೇಂಗಾ ಮತ್ತು ತೊಗರಿ ಬಿತ್ತನೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಉಳಿದ ಎಲ್ಲ ಬೆಳೆಗಳ ಬಿತ್ತನೆಯಲ್ಲಿ ಗುರಿ ಸಾಧನೆಯಾಗಿದೆ.

ಆರಂಭದಲ್ಲಿ ಬಿತ್ತನೆಯಾಗಿದ್ದ ಶೇಂಗಾ ಬೆಳೆ ಕೊಯ್ಲು ಹಂತದಲ್ಲಿದೆ. ಈಗಿನ ತೇವಾಂಶಕ್ಕೆ ಶೇಂಗಾ ಪೂರ್ಣವಾಗುತ್ತದೆ. ಮೊದಲು ಬಿತ್ತನೆಯಾಗಿದ್ದ ರಾಗಿ, ತೆನೆ ಬಲಿಯುವ ಹಂತದಲ್ಲಿದೆ. ಸ್ವಲ್ಪ ಹಿಂದೆ ಬಿತ್ತನೆ ಮಾಡಿದ್ದು ಕಾಳು ಕಟ್ಟುವ ಹಂತದಲ್ಲಿದೆ. ಆಕ್ಟೋಬರ್‌ ಅಂತ್ಯದವರೆಗೂ ಮಳೆ ಅಗತ್ಯವಾಗಿದೆ.

ಬೆಳೆಗಳಿಗೆ ಅಗತ್ಯವಿರುವಷ್ಟು ಮಳೆ ಸಕಾಲಕ್ಕೆ ಸುರಿದಿದೆ. ಆದರೆ ಬಿರು ಮಳೆಯ ಸುಳಿವಿಲ್ಲ. ಕೆರೆಕುಂಟೆಗಳಿಗೆ ನೀರು ಬಾರದಿರುವುದು ಆತಂಕಕ್ಕೆ ಕಾರಣವಾಗಿದೆ. ಅಂತರ್ಜಲ ವೃದ್ಧಿಯಾಗಿಲ್ಲ. ಈಗಲೂ ನಗರ ಮತ್ತು ಹಳ್ಳಿಗಳಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮಳೆಯಾಗಿ ಕೆರೆ ಕುಂಟೆಗಳು, ಹಳ್ಳ ಕೊಳ್ಳಗಳು ತುಂಬಬೇಕು ಎಂಬುದು ಜನರ ಆಶಯವಾಗಿದೆ.

ಎಂ.ರಾಮಕೃಷ್ಣಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.