ADVERTISEMENT

ಹನಿ ನೀರಾವರಿಯಲ್ಲಿ ರಾಗಿ ಬೆಳೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2012, 7:55 IST
Last Updated 20 ಮಾರ್ಚ್ 2012, 7:55 IST

ಶಿಡ್ಲಘಟ್ಟ: ರಾಗಿಯನ್ನು ತಾಲ್ಲೂಕಿನಲ್ಲಿ ಮಳೆ ಯಾಶ್ರಿತ ಬೆಳೆಯಾಗಿ ಬೆಳೆಯುತ್ತಾರೆ. ಇನ್ನು ಕೆಲವರು ವಾರ್ಷಿಕ ಬೆಳೆಯಾಗಿ, ಕೆಲವೆಡೆ ಮಿಶ್ರ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ತಾಲ್ಲೂಕಿನ ಆನೂರು ಗ್ರಾಮದ ರೈತ ಬಚ್ಚಪ್ಪ ಹನಿ ನೀರಾವರಿ ಮತ್ತು ಸಾವಯವ ಪದ್ಧತಿಯಲ್ಲಿ 30 ಗುಂಟೆ ಜಮೀನಿನಲ್ಲಿ ಸುಮಾರು 15 ಕ್ವಿಂಟಲ್ ರಾಗಿ ಬೆಳೆದು ಇಲ್ಲಿನ ರೈತರಿಗೆ ಮಾದರಿಯಾಗಿದ್ದಾರೆ.

`ಇಂಡಾಫ್-7~ ತಳಿಯ ರಾಗಿಯನ್ನು ಕೃಷಿ ವಿಶ್ವವಿದ್ಯಾಲಯದಿಂದ ತಂದು ನವೆಂಬರ್ ತಿಂಗಳ ಕಡೆಯಲ್ಲಿ  ನಾಟಿ ಮಾಡಿ ಈಗ ಉತ್ತಮ ಇಳುವರಿ ಯನ್ನು ಪಡೆದಿದ್ದಾರೆ. ಹನಿ ನೀರಾವರಿ ಮತ್ತು ಸಾಲು ಪದ್ಧತಿಯಲ್ಲಿ ಬೆಳೆಯನ್ನು ಬೆಳೆದಿದ್ದು ಕಡಿಮೆ ಖರ್ಚಿನಿಂದ ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

 ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ. ಕಡಿಮೆ ನೀರು. ಕಳೆ ನಿರ್ವಹಣೆ ಸುಲಭ. ಕೂಲಿಯಾಳುಗಳ ಹಣ ಉಳಿತಾಯ ಮುಂತಾದ ಅನುಕೂಲಗಳನ್ನು ಕಂಡುಕೊಂಡು ಸಾವಯವ ಕೃಷಿಯಿಂದ ರಾಗಿ ಬೆಳೆಯುವುದು ನೀರಿನ ಅಭಾವವಿರುವ ನಮ್ಮ ತಾಲ್ಲೂಕಿಗೆ ಅನುಕೂಲಕರವಾಗಿದೆ.

 `ಕೃಷಿ ವಿಶ್ವವಿದ್ಯಾಲಯದಲ್ಲಿ ಮಂಜಿಗೆ, ಚಳಿಗೆ ಬೆಳೆಯುವ ಹೆಚ್ಚು ನೀರು ಬೇಡದ ತಳಿ ಎಂದು  ಐದು ಕೆಜಿಯ ಒಂದು ಚೀಲಕ್ಕೆ 105 ರೂಪಾಯಿ ಕೊಟ್ಟು ತಂದೆವು.

ನವೆಂಬರ್ ತಿಂಗಳ ಕಡೆಯಲ್ಲಿ ಒಕ್ಕಲು ಮಾಡಿ ಡಿಸೆಂಬರ್ ಆರಂಭದಲ್ಲಿ ಸುಮಾರು 30 ಗುಂಟೆ ಜಮೀನಿನಲ್ಲಿ ಗಾಳಿಯಾಡಲು 2 ಅಡಿ ಅಂತರ ಬಿಟ್ಟು ಸಾಲು ಪದ್ಧತಿಯಲ್ಲಿ ನಾಟಿ ಮಾಡಿದೆವು. ಇದಕ್ಕೆ ಮೊದಲು ಬೆಳೆದಿದ್ದ ಎಲೆ ಕೋಸಿನ ಸೊಪ್ಪನ್ನೇ ಮಣ್ಣಿನಲ್ಲಿ ಬೆರೆಸಿದ್ದೆವು ಮತ್ತು ಭೂಮಿಗೆ ಲಘು ಪೋಷಕಾಂಶಗಳನ್ನು ನೀಡಿದೆವು.
 
ಹನಿ ನೀರಾವರಿಯಲ್ಲಿ ನೀರು ಹಾಯಿಸುವಾಗ ರಸ ಸಾರ ತೊಟ್ಟಿಯಿಂದ ರಸಸಾರವನ್ನೂ ಜೊತೆಯಲ್ಲಿ ಹರಿಸುತ್ತಿದ್ದುದರಿಂದ ಬೇರೆ ಗೊಬ್ಬರದ ಅಗತ್ಯ ಬರಲಿಲ್ಲ~ ಎನ್ನುತ್ತಾರೆ ರೈತ ಆನೂರಿನ ಬಚ್ಚಪ್ಪ.
`ನಮ್ಮ ತಾಲ್ಲೂಕಿನಲ್ಲಿ ನೀರು ಹಾಗೂ ಕೂಲಿಯಾಳುಗಳ ಸಮಸ್ಯೆ ಬಹಳಷ್ಟಿದೆ. ರಾಗಿ ನಮಗೆ ಅತ್ಯಗತ್ಯ ಬೆಳೆ.

ಹೀಗಾಗಿ ಈ ಪದ್ಧತಿಯನ್ನು ಬಳಸಿ ಬೆಳೆ ಬೆಳೆಯುವುದರಿಂದ ಕಡಿಮೆ ಖರ್ಚಿನಲ್ಲಿ ಲಾಭವನ್ನೂ ಮಾಡಿಕೊಳ್ಳಬಹುದಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಈ ತಳಿಯ ಬಳಕೆ ಹೆಚ್ಚಿದೆ. ಇದನ್ನು ಬೀಜಕ್ಕೂ ಬಳಸಬಹುದಾಗಿದೆ~ ಎಂದು ಅವರು ತಿಳಿಸಿದರು.

 ರೈತ ಆನೂರಿನ ಬಚ್ಚಪ್ಪ ಅವರ ಮೊಬೈಲ್ 9731114183 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.