ಚಿಕ್ಕಬಳ್ಳಾಪುರ: ದೇವರನ್ನು ಒಲಿಸಿಕೊಳ್ಳಲು ಮತ್ತು ಮನಸ್ಸಿನೊಳಗಿನ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಬಗೆಬಗೆಯ ಧಾರ್ಮಿಕ ಆಚರಣೆ ನೆರವೇರಿಸಲಾಗುತ್ತದೆ. ಕೆಲವರು ಹೋಮ, ಹವನ ಮುಂತಾದವು ಮಾಡಿದರೆ, ಇನ್ನೂ ಕೆಲವರು ವಿಶೇಷ ಪೂಜೆ–ಪುರಸ್ಕಾರಗಳನ್ನು ಮಾಡುತ್ತಾರೆ. ಆದರೆ ತಾಲ್ಲೂಕಿನ ಹಿರೇನಾಗವಲ್ಲಿ ಗ್ರಾಮಸ್ಥರು ವಿಭಿನ್ನ ಮತ್ತು ವಿಶಿಷ್ಟವಾದ ರೀತಿಯಲ್ಲಿ ದೇವರಲ್ಲಿ ಮೊರೆಯಿಡುತ್ತಾರೆ. ದೇವರಿಗೆ ಪ್ರಾರ್ಥಿಸುತ್ತಾರೆ.
ಗ್ರಾಮದ ಬಳಿಯಿರುವ ನಾಗವಲ್ಲಿ ಬೆಟ್ಟದ ಮೇಲಿರುವ ಪುರಾತನ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿದ ಬಳಿಕ ಗ್ರಾಮಸ್ಥರು ಅಲ್ಲಿ ಇರುವ ಕಲ್ಲುಗಳನ್ನು ಪೇರಿಸಿಕೊಂಡು ಪುಟ್ಟದಾದ ಮನೆ ಕಟ್ಟುತ್ತಾರೆ. ಪುಟ್ಟ ಮನೆ ಆಕಾರದಲ್ಲಿ ಕಲ್ಲುಗಳನ್ನು ಜೋಡಿಸುವ ಗ್ರಾಮಸ್ಥರು ಹರಕೆ ಈಡೇರಿಸುವಂತೆ ಮುನೇಶ್ವರಸ್ವಾಮಿಗೆ ಬೇಡುತ್ತಾರೆ. ಹರಕೆ ಈಡೇರಿದ ಮೇಲೆ ಮತ್ತೊಮ್ಮೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
‘ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಹರಕೆ ಈಡೇರಿಕೆಗೆ ಈ ರೀತಿ ಪುಟ್ಟ ಮನೆಗಳನ್ನು ನಿರ್ಮಿಸುವುದು ವಾಡಿಕೆ. ಆಂಧ್ರಪ್ರದೇಶದ ಬಾಯಕೊಂಡ ಹೊರತುಪಡಿಸಿದರೆ ಕೆಲವೇ ಪ್ರದೇಶಗಳಲ್ಲಿ ಮಾತ್ರವೇ ಈ ರೀತಿ ಆಚರಿಸಲಾಗುತ್ತದೆ ಎಂದು ಗ್ರಾಮದ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಂತಿಷ್ಟು ಅವಧಿಯೊಳಗೆ ಮನೆಯನ್ನು ಕಟ್ಟಿಸಿಕೊಳ್ಳಲು, ಆಸ್ತಿ ಸಂಪಾದನೆ, ಮದುವೆಯಾಗಲು ದೇವರಲ್ಲಿ ಮೊರೆಯಿಡುತ್ತ ಈ ಪುಟ್ಟ ಪುಟ್ಟ ಮನೆಗಳನ್ನು ಕಟ್ಟಲಾಗುತ್ತದೆ. ಬೆಟ್ಟದ ತುದಿಯಲ್ಲಿನ ದೇವಾಲಯದ ಎದುರು ಮಾತ್ರವೇ ಅವುಗಳನ್ನು ಕಾಣಬಹುದು. ಅಲ್ಲಿ ಕಲ್ಲುಗಳು ಸಿಗದಿದ್ದರೆ, ಹಳೆಯದ್ದನ್ನೇ ಬದಲಾಯಿಸಿ ಭಕ್ತಾದಿಗಳು ಬೇರೆಯದ್ದೇ ಮನೆಗಳನ್ನು ಕಟ್ಟುತ್ತಾರೆ. ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಈ ಧಾರ್ಮಿಕ ಪದ್ಧತಿಯನ್ನು ನಾವು ಈಗಲೂ ನಡೆಸಿಕೊಂಡು ಬರುತ್ತಿದ್ದೇವೆ’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.