ADVERTISEMENT

ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ

ಹೊಸ ಮಳಿಗೆ ನೀಡುವಂತೆ ಹಳೇ ಬಸ್‌ ನಿಲ್ದಾಣದ ವರ್ತಕರ ಸಂಘದ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:16 IST
Last Updated 13 ಜುಲೈ 2017, 11:16 IST

ಚಿಕ್ಕಬಳ್ಳಾಪುರ: ನಗರಸಭೆಯು ಗುರುವಾರ (ಜು.13) ನಡೆಸಲು ಉದ್ದೇಶಿಸಿದ್ದ ನಗರದ ನಗರಸಭೆ ಖಾಸಗಿ ಬಸ್ ನಿಲ್ದಾಣದಲ್ಲಿರುವ ಮಳಿಗೆ ಹರಾಜು ಪ್ರಕ್ರಿಯೆಯನ್ನು ನಡೆಸದಂತೆ ಹಳೇ ಬಸ್‌ ನಿಲ್ದಾಣದ ವರ್ತಕರ ಸಂಘ ಹೈಕೋರ್ಟ್‌ನಿಂದ ಮಂಗಳವಾರ ತಡೆಯಾಜ್ಞೆ ತಂದಿದೆ.

ಹಳೇ ಬಸ್‌ ನಿಲ್ದಾಣದಲ್ಲಿದ್ದ ಮಳಿಗೆಗಳಲ್ಲಿ ಅನೇಕ ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದ ವರ್ತಕರು ನೂತನ ಖಾಸಗಿ ನಿಲ್ದಾಣದಲ್ಲಿರುವ ಮಳಿಗೆಗಳನ್ನು ಈ ಹಿಂದೆ ಜಿಲ್ಲಾಧಿಕಾರಿ ಅವರು ನೀಡಿರುವ ಆಶ್ವಾಸನೆಯಂತೆ ತಮಗೆ ನೀಡಬೇಕೆಂದು ಅನೇಕ ಬಾರಿ ನಗರಸಭೆಯ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಅವರಿಗೆ ಮನವಿ ಸಲ್ಲಿಸಿದ್ದರು. ಇದಕ್ಕೆ ಒಪ್ಪದ ಜಿಲ್ಲಾಧಿಕಾರಿ ಅವರು ಜುಲೈ 13 ರಂದು ಮಳಿಗೆಗಳನ್ನು ಹರಾಜು ಹಾಕಲು ನಗರಸಭೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.

ಇದನ್ನು ಪ್ರಶ್ನಿಸಿ ವರ್ತಕರ ಸಂಘದ ಪದಾಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಬುಧವಾರ ನ್ಯಾಯಾಲಯದ ಆದೇಶವನ್ನು ನಗರಸಭೆ ಮುಖ್ಯ ಲೆಕ್ಕಾಧಿಕಾರಿ ನಾಗೇಂದ್ರ ಅವರಿಗೆ ಸಲ್ಲಿಸಿದ ಸಂಘದ ಸದಸ್ಯರು ಹರಾಜು ರದ್ದುಪಡಿಸಿ, ಮಳಿಗೆಗಳನ್ನು ಆದ್ಯತೆ ಮೆರೆಗೆ ತಮಗೆ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ವರ್ತಕರ ಸಂಘದ ಉಪಾಧ್ಯಕ್ಷ ಕೆ.ಸಿ.ಪ್ರಕಾಶ್ ಮಾತನಾಡಿ, ‘ನಾವು 30 ವರ್ಷಗಳಿಂದ ಹಳೇ ಬಸ್‌ ನಿಲ್ದಾಣದಲ್ಲಿದ್ದ ಮಳಿಗೆಗಳಲ್ಲಿ ವ್ಯಾಪಾರ ಮಾಡಿಕೊಂಡು ಕಾಲ ಕಾಲಕ್ಕೆ ನಗರಸಭೆಗೆ ಬಾಡಿಗೆ ಕಟ್ಟಿಕೊಂಡು ಬರುತ್ತಿದ್ದೆವು. 2013ರಲ್ಲಿ ಬಸ್‌ ನಿಲ್ದಾಣ ಕೆಡವಿ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಲಾಯಿತು.

ಆ ವೇಳೆ ಅಂದಿನ ಜಿಲ್ಲಾಧಿಕಾರಿ ಮಂಜುಳಾ ಅವರು ಹೊಸ ಕಟ್ಟಡದಲ್ಲಿ ನಿರ್ಮಿಸುವ ಮಳಿಗೆಗಳನ್ನು ಆದ್ಯತೆ ಮೇಲೆ ಈ ಮೊದಲು ವ್ಯಾಪಾರ ಮಾಡಿಕೊಂಡಿದ್ದ ವರ್ತಕರಿಗೇ ಲಾಟರಿ ಮುಖಾಂತರ ನೀಡುವುದಾಗಿ ಆಶ್ವಾಸನೆ ನೀಡಿ, ಅಂಗಡಿಗಳನ್ನು ಖಾಲಿ ಮಾಡಿಸಿದ್ದರು’ ಎಂದು ಹೇಳಿದರು.

‘ಕಳೆದ ಮೂರು ವರ್ಷಗಳಿಂದ ನಾವು ಅಂಗಡಿ, ವ್ಯವಹಾರವಿಲ್ಲದೆ ಕಷ್ಟದಿಂದ ಬದುಕುತ್ತಿದ್ದೇವೆ. 49 ಮಳಿಗೆಗಳನ್ನು ಹೊಂದಿರುವ ನಗರಸಭೆ ಖಾಸಗಿ ಬಸ್‌ ನಿಲ್ದಾಣದ ಹೊಸ ಕಟ್ಟಡ ಉದ್ಘಾಟನೆಗೊಂಡು ವರ್ಷ ಕಳೆದಿದೆ. ಈವರೆಗೆ ಅದರಲ್ಲಿನ ಮಳಿಗೆಗಳನ್ನು ನಮಗೆ ನೀಡುತ್ತಿಲ್ಲ. ನಮಗೆ ಮಳಿಗೆ ನೀಡುವುದಾಗಿ ಈ ಹಿಂದೆ ಹೇಳುತ್ತ ಬಂದಿದ್ದ ಜಿಲ್ಲಾಧಿಕಾರಿ ಅವರು ಇತ್ತೀಚೆಗೆ ಮಳಿಗೆ ನೀಡಲು ಸಾಧ್ಯವಿಲ್ಲ. ಸಾರ್ವಜನಿಕ ಹರಾಜು ನಡೆಸಲಾಗುತ್ತದೆ. ಬೇಕಿದ್ದರೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಎನ್ನುತ್ತಿದ್ದಾರೆ’ ಎಂದು ತಿಳಿಸಿದರು.

‘ಈ ಕುರಿತು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಗೆ ಮನವಿ ಸಲ್ಲಿಸಿದರೂ ಯಾರೊಬ್ಬರೂ ನಮಗೆ ಸ್ಪಂದಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಕಾನೂನು ಹೋರಾಟಕ್ಕೆ ಮುಂದಾದೆವು. ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೇವೆ. ಹೈಕೋರ್ಟ್‌ ಮಂಗಳವಾರ ಮಳಿಗೆಗಳ ಹರಾಜು ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ. ನಮಗೆ ನ್ಯಾಯಬೇಕು’ ಎಂದು ಆಗ್ರಹಿಸಿದರು.

ಸಂಘದ ಅಧ್ಯಕ್ಷ ರವಿ ಮಾತನಾಡಿ, ‘ವರ್ತಕರು ಈ ಹಿಂದೆ ಹಳೇ ಮಳಿಗೆಗಳಿಗೆ ನೀಡಿರುವ ಠೇವಣಿ ಮೊತ್ತ ಇಂದಿಗೂ ನಗರಸಭೆ ಬಳಿಯೇ ಇದೆ. ಮೊದಲೇ ನಮಗೆ ಹೊಸ ಮಳಿಗೆ ನೀಡಲು ಸಾಧ್ಯವಿಲ್ಲ ಎಂದು ಠೇವಣಿಯನ್ನಾದರೂ ವಾಪಸ್‌ ನೀಡಿದ್ದರೆ ಇಷ್ಟೊತ್ತಿಗೆ ನಾವು ಬೇರೆ ಕಡೆ ಬದುಕಿಕೊಳ್ಳುತ್ತಿದ್ದೆವು. ಇದೀಗ ಏಕಾಏಕಿ ಮಳಿಗೆ ನೀಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಇದನ್ನು ಒಪ್ಪಲಾಗದು.

ಹಳಬರಿಗೇ ಮೊದಲು ಮಳಿಗೆ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿದರು. ಸಂಘದ ಕಾರ್ಯದರ್ಶಿ ಮುನಿ ವೆಂಕಟಸ್ವಾಮಿ, ಸದಸ್ಯರಾದ ವಿ.ಶ್ರೀನಿವಾಸ್, ಫೈರೋಜ್‌ ಪಾಷಾ, ರವಿಕುಮಾರ್, ಶ್ರೀನಿವಾಸ್, ಚಂದ್ರಶೇಖರ್‌, ಗುರು, ಮೆಡಿಕಲ್ ಬಾಬು ಇದ್ದರು.

***

ಹರಾಜು ಪ್ರಕ್ರಿಯೆ ರದ್ದು
‘ಮಳಿಗೆ ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ಕಾರಣ ಹರಾಜು ರದ್ದುಗೊಳಿಸಿದ್ದೇವೆ. ಸೂಕ್ತ ದಾಖಲೆಗಳೊಂದಿಗೆ ನಾವು ಕೂಡ ಹೈಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿ, ಹಳೆ ಬಸ್‌ ನಿಲ್ದಾಣದ ವರ್ತಕರಿಗೆ ಆದ್ಯತೆಯಲ್ಲಿ ಮಳಿಗೆ ನೀಡಲು ಏಕೆ ಸಾಧ್ಯವಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ನಗರಸಭೆ ಆಯುಕ್ತ ಉಮಾಕಾಂತ್ ತಿಳಿಸಿದರು.

***

ನಗರಸಭೆ ನಮಗೆ ಹೊಸ ಮಳಿಗೆ ನೀಡಲು ಸಾಧ್ಯವಿಲ್ಲ ಎಂದಿದ್ದರೆ ನಾವು ಆಗಲೇ ಮಳಿಗೆ ಖಾಲಿ ಮಾಡದೆ ನ್ಯಾಯಾಲಯಕ್ಕೆ ಹೋಗಿ ನ್ಯಾಯ ಪಡೆಯುತ್ತಿದ್ದೆವು.
ರವಿ, ಹಳೆ ಬಸ್‌ ನಿಲ್ದಾಣದ ವರ್ತಕರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.