ADVERTISEMENT

‘ನಮಗೂ ಜನರು ಮತ ಹಾಕಿದ್ದಾರೆ’

ಪರಿಶೀಲನಾ ಸಭೆಯಲ್ಲಿ ಶಾಸಕರ ವಿರುದ್ಧ ತಾ.ಪಂ. ಅಧ್ಯಕ್ಷೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 7:10 IST
Last Updated 7 ಜನವರಿ 2014, 7:10 IST

ಬಾಗೇಪಲ್ಲಿ (ಚಿಕ್ಕಬಳ್ಳಾಪುರ):  ‘ನಾವು ದುಡ್ಡು ಕೊಟ್ಟು ಮತ­ಗ­ಳನ್ನು ಖರೀದಿಸಿ, ಚುನಾವಣೆಯಲ್ಲಿ ಗೆಲ್ಲಲಿಲ್ಲ. ನಾವು ಜನರಿಂದ ಆಯ್ಕೆಯಾದ ಜವಾಬ್ದಾರಿಯುತ ಚುನಾಯಿತ ಪ್ರತಿನಿಧಿ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವ ಹಕ್ಕು ನಮಗೂ ಇದೆ. ನಾವು ಮಾತನಾಡಬಾರದೆಂದು ತಡೆಯುವ ಹಕ್ಕು ಯಾರಿಗೂ ಇಲ್ಲ. ಸ್ಥಳೀಯ ಶಾಸಕರು ಪ್ರತಿ­ಯೊಂದು ವಿಚಾರದಲ್ಲೂ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’

–ಹೀಗೆ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮುನಿ­ರತ್ನಮ್ಮ.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕರ ವಿರುದ್ಧ ಹರಿಹಾಯ್ದ ಅವರು, ‘ಜನರ ಪರವಾಗಿ ಮಾತನಾಡಲು ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ನಮಗೂ ಹಕ್ಕಿದೆ. ನಮ್ಮನ್ನು ಜನರು ಮತ ಹಾಕಿ ಗೆಲ್ಲಿಸಿದ್ದಾರೆ’ ಎಂದರು.

ಸಭೆ ನಡೆಯುತ್ತಿದ್ದ ವೇಳೆ ವಿವರಣೆ ನೀಡುತ್ತಿದ್ದ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಲಕ್ಷ್ಮಣಪ್ಪ, ‘ಕೇವಲ ತರಕಾರಿಗಳಿಗೆ ರೂ. 21 ಲಕ್ಷ ಖರ್ಚು ಮಾಡಲಾಗಿದೆ. ಆಹಾರ ಸಾಮಗ್ರಿಗಳ ಸಾಗಣೆಗೆ 3.50 ಲಕ್ಷ ರೂಪಾಯಿ ಮತ್ತು ಸರ್ಕಾರೇತರ ಸಂಸ್ಥೆಗೆ 4.50 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ’ ಎಂದು ಹೇಳಿದಾಗ, ಅದಕ್ಕೆ ಮುನಿರತ್ನಮ್ಮ ಆಕ್ಷೇಪಣೆ ವ್ಯಕ್ತಪಡಿಸಿದರು. ಯಾವ ವಾಹನಗಳಲ್ಲಿ ತರಕಾರಿಗಳನ್ನು ಸಾಗಣೆ ಮಾಡುತ್ತಿದ್ದೀರಾ ? ನಿಮ್ಮ ನಿರ್ವಹಣೆ ಸರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣವೇ ಪ್ರತಿಕ್ರಿಯಿಸಿದ ಶಾಸಕ ಎಸ್‌.ಎನ್‌.ಸುಬ್ಬಾರೆಡ್ಡಿ, ‘ಇದು ನನ್ನ ಅಧ್ಯಕ್ಷತೆಯಲ್ಲಿ ಕರೆಯಲಾಗಿರುವ ಪ್ರಗತಿ ಪರಿಶೀಲನಾ ಸಭೆ. ಅದೂ ಮೂರು ತಿಂಗಳಿಗೊಮ್ಮೆ ಕರೆದಿರುವ ಸಭೆ. ನಿಮಗೆ ಪ್ರತ್ಯೇಕವಾದ ಸಾಮಾನ್ಯ ಸಭೆ ಕರೆಯ­ಲಾಗುತ್ತದೆ. ಸಭೆಗಳಲ್ಲಿ ಮಾಹಿತಿ ಪಡೆದುಕೊಳ್ಳಿ’ ಎಂದು ಉತ್ತರಿಸಿದರು. ಆಗ ಇನ್ನೂ ಸಿಟ್ಟಿಗೆದ್ದ ಮುನಿರತ್ನಮ್ಮ ಅವರು, ‘ಶಾಸಕರೇ, ನೀವು ಸರ್ವಾಧಿಕಾರಿಯಂತೆ ವರ್ತಿಸಬೇಡಿ’ ಎಂದು ಎಚ್ಚರಿಕೆ ನೀಡಿದರು.

‘ತಾಲ್ಲೂಕಿನ ಆಚಗಾನಹಳ್ಳಿ ಕಸ್ತೂರ್ಬಾ ವಸತಿ ಶಾಲೆ ಸೇರಿದಂತೆ ಬಹುತೇಕ ಸರ್ಕಾರಿ ಶಾಲೆಗಳಿಗೆ ಆಹಾರ ಸಾಮಗ್ರಿ ಮತ್ತು ತರಕಾರಿ ಸರಿಯಾಗಿ ತಲುಪುತ್ತಿಲ್ಲ. ನಿಗದಿತ ಕಾಲಮಿತಿಯೊಳಗೆ ದೊರೆಯುತ್ತಿಲ್ಲ. ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಎಲ್ಲದರ ಬಗ್ಗೆ ಅಕ್ಷರ ದಾಸೋಹ ಅಧಿಕಾರಿಗಳು ತುಂಬ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಮುನಿರತ್ನಮ್ಮ ಅತೃಪ್ತಿ ವ್ಯಕ್ತಪಡಿಸಿದರು.

ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ ಕ್ಷೇತ್ರ ಶಿಕ್ಷಣಾ­ಧಿಕಾರಿ ಕೆ.ವೆಂಕಟೇಶ್, ಕಸ್ತೂರ್‌ಬಾ ಶಾಲೆಗೆ ಸರಬರಾಜು ಮಾಡುತ್ತಿರುವ ಆಹಾರ ಸಾಮಾಗ್ರಿಗಳನ್ನು ಟೆಂಡರ್ ಪ್ರಕ್ರಿಯೆಯಂತೆಯೇ ಪೂರೈಸಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ವ್ಯಾಪ್ತಿಗೆ ಬರುತ್ತದೆ’ ಎಂದರು.

‘ತಾಲ್ಲೂಕಿನಲ್ಲಿ 4 ರೈತ ಸಂಪರ್ಕ ಕೇಂದ್ರಗಳಿಗೆ ಅನುದಾನ­ವಿದ್ದರೂ ಅವುಗಳ ನಿರ್ವಹಣೆ ಸಮರ್ಪಕವಾಗಿ ನೆರವೇರುತ್ತಿಲ್ಲ. ರೈತರಿಗೆ ಹಲವಾರು ಯೋಜನೆಗಳ ಬಗ್ಗೆ ಮಾಹಿತಿಯೇ ದೊರೆಯುತ್ತಿಲ್ಲ. ಇಂತಹ ಸಂಪರ್ಕ ಕೇಂದ್ರಗಳಿಂದ ರೈತರಿಗೆ ಏನು ಪ್ರಯೋಜನ’ ಎಂದು ಎಸ್‌.ಎನ್‌.ಸುಬ್ಬಾರೆಡ್ಡಿ ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಕೃಷಿ ಇಲಾಖೆ ಅಧಿಕಾರಿ ಮಂಜುನಾಥ್‌, ರೈತರ ಸಮಸ್ಯೆಗಳನ್ನು ಪರಿಹರಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ಮಾಹಿತಿ ನೀಡುತ್ತಿದ್ದೇವೆ ಎಂದರು. 

ರೇಷ್ಮೆ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಯಿತು. ಸಭೆಗೆ ಗೈರುಹಾಜರಾದ ಅಧಿಕಾರಿಗಳ ವಿರುದ್ಧ ನೋಟಿಸ್‌ ಹೊರಡಿಸುವಂತೆ ಸುಬ್ಬಾರೆಡ್ಡಿ ಸೂಚಿಸಿದರು.

ತಹಶೀಲ್ದಾರ್‌ ಎಂ.ಎ.ಪದ್ಮಾ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ನಾಯ್ಕ್‌, ಪಂಚಾಯತ್‌ರಾಜ್‌ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗಪ್ಪ, ಸಿಡಿಪಿ ಲಕ್ಷ್ಮಿದೇವಮ್ಮ, ಬೆಸ್ಕಾಂ ಇಲಾಖೆಯ ಬಾಲಾಜಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ಸಿ.ವಸಂತ್‌, ಎಸ್‌ಐ ಮುನಿರೆಡ್ಡಿ, ಉಪತಹಶೀಲ್ದಾರ್ ಎಸ್‌.ಮುನಿ­ರಾಮಯ್ಯ, ತೋಟಗಾರಿಕೆ ಇಲಾಖೆಯ ಶ್ರೀನಿವಾಸ್‌, ಪುರಸಭೆಯ ವ್ಯವಸ್ಥಾಪಕ ಬಿ.ಎ.ಅಬ್ದುಲ್‌ ವಾಜೀದ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.