ADVERTISEMENT

‘ಸಿಪಿಎಂ ಜಾತಿ ರಾಜಕಾರಣ ಮಾಡಿಲ್ಲ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 7:01 IST
Last Updated 16 ಡಿಸೆಂಬರ್ 2013, 7:01 IST

ಗುಡಿಬಂಡೆ: ಸಿಪಿಎಂ ಪಕ್ಷ ಇದುವರೆಗೂ  ಜಾತಿಯ ವಿಚಾರ ಮುಂದಿಟ್ಟುಕೊಂಡು ಹೋರಾಟ ಮಾಡಿಲ್ಲ. ದಲಿತ ಸಂಘರ್ಷ ಸಮಿತಿ ಆರೋಪಿಸಿದಂತೆ ಜಾತಿ ಕಾರಣಕ್ಕೆ ಯಾಚುದೇ ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿಲ್ಲ. ದ.ಸಂ.ಸ ಮಾಡಿದ ಆರೋಪ ಸತ್ಯಕ್ಕೆ ದೂರ ಎಂದು  ಸಿಪಿಎಂ ತಾಲ್ಲೂಕು ಘಟಕದ ಕಾರ್ಯದರ್ಶಿ ಬಿ.ಜಯರಾಮರೆಡ್ಡಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಯಾವುದೇ ಚುನಾಯಿತ ಪ್ರತಿನಿಧಿ ಭ್ರಷ್ಟಾಚಾರದಲ್ಲಿ ತೊಡಗಿದರೆ ಅಂಥವರನ್ನು ಪಕ್ಷದಿಂದ ಹೊರ ಹಾಕಲಾಗುವುದು. ಈ ಹಿಂದೆ ಬಾಗೇಪಲ್ಲಿ ಪುರಸಭೆ ಸದಸ್ಯರನ್ನು ಪಕ್ಷದಿಂದ ಹೊರಗೆ ಹಾಕಲಾಗಿತ್ತು ನಮ್ಮ ಪಕ್ಷದ ವಿರುದ್ದ ದಲಿತ ಸಂಘರ್ಷ ಸಮಿತಿ ಮಾಡಿದ ಆರೋಪಗಳು ಸತ್ಯಕ್ಕೆ ದೂರ ಎಂದರು.

ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಎಚ್.ಪಿ. ಲಕ್ಷ್ಮೀನಾರಾಯಣ ಮಾತ­ನಾಡಿ, ತಾಲ್ಲೂಕಿನ ಸೋಮೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಭ್ರಷ್ಟಾ­ಚಾರ ನಡೆದಿದೆ ಎಂದು 2 ತಿಂಗಳ ಹಿಂದೆ ಸಿಪಿಎಂ ನೇತೃತ್ವದಲ್ಲಿ ಗ್ರಾಮ ಪಂಚಾ­ಯತಿ ಸದಸ್ಯರು ಪ್ರತಿಭಟನೆ ಮಾಡಿ­ದ್ದರು. ಪಂಚಾಯತಿಯಲ್ಲಿ ನಡೆದ ಭ್ರಷಾ­ಚಾರದ ಬಗ್ಗೆ ತನಿಖೆ ನಡೆಸು­ವುದಾಗಿ ಕಾರ್ಯ­ನಿರ್ವಹಣಾಧಿಕಾರಿ  ಆಶ್ವಾಸನೆ ನೀಡಿದ್ದರು ಎಂದರು.

ಆಶ್ವಾಸನೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು. ಡಿ.16ರಂದು  ಸೋಮೇನಹಳ್ಳಿ ಪಂಚಾಯತಿಯಲ್ಲಿ ಲೆಕ್ಕಪರಿಶೋಧನೆ ನಡೆಯಬೇಕಿತ್ತು ಆದರೆ ಡಿ.12ರಂದು ಬೆಳಿಗ್ಗೆ ಗ್ರಾಮ ಪಂಚಾಯತಿ ಕಡತಗಳ ಕೊಠಡಿಗೆ  ಬೆಂಕಿ ಹಾಕಿ ದಾಖಲೆ ನಾಶ ಪಡಿಸಿದ್ದಾರೆ. ಹಿಂದಿನ ಕಾರ್ಯದರ್ಶಿ ಮದ್ದರೆಡ್ಡಿ ಮತ್ತು ಇ.ಒ. ಇಂದ್ರೇಶ್ ವಿರುದ್ಧ ಸಮಗ್ರ ತನಿಖೆ ಆಗಬೇಕು ಎಂದು ಪ್ರತಿಭಟನೆ ಮಾಡಲಾಗಿತ್ತು. ಇದರಲ್ಲಿ ಯಾವುದೇ ಜಾತಿ ವಿಚಾರ ಇಲ್ಲ. ಇದು ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಎಂದರು.

ಬೆಂಕಿ ಪ್ರಕರಣ:ಖಂಡನೆ
ಗುಡಿಬಂಡೆ:
ತಾಲ್ಲೂಕಿನ ಸೋಮೇನ­ಹಳ್ಳಿ ಗ್ರಾಮ ಪಂಚಾಯತಿ ಕಡತಗಳಿಗೆ ಬೆಂಕಿ ಬಿದ್ದ ಪ್ರಕರಣದ ದಿಕ್ಕು ತಪ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಣಾ­ಧಿಕಾರಿ ದಲಿತ ಸಂಘಟನೆಗಳನ್ನು ಛೂ ಬಿಟ್ಟು, ದಲಿತ ಸಂಘರ್ಷ ಸಮಿತಿ ನೀಡಿದ ಹೇಳಿಕೆಯನ್ನು ಸಿಪಿಎಂ ದಲಿತ ಹಕ್ಕುಗಳ ಉಪಸಮಿತಿ ಖಂಡಿಸಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಹಂಪಸಂದ್ರ ಅಶ್ವತ್ಥಪ್ಪ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾ ಗೋಷ್ಠಿಯಲ್ಲಿ  ಸಿಪಿಎಂ ದಲಿತ ಹಕ್ಕುಗಳ ಉಪಸಮಿತಿ ಕಾರ್ಯ­ದರ್ಶಿ ಕಾಲುವ­ಗಡ್ಡಹಳ್ಳಿ ವೆಂಕಟ­ರಮಣ ಮಾತನಾಡಿ, ತಾಲ್ಲೂಕಿನ ವರ್ಲಕೊಂಡ ಗ್ರಾಮ ಪಂಚಾ­ಯತಿ­ಯಲ್ಲಿ ಭ್ರಷ್ಟಾಚಾರ ನಡೆಸಿದ ಕಾರ್ಯ­ದರ್ಶಿಯನ್ನು ಅಮಾ­ನತು ಮಾಡ­ಲಾಗಿತ್ತು. ಸೋಮೇನಹಳ್ಳಿ ಗ್ರಾಮ ಪಂಚಾಯತಿಯಲ್ಲಿಯೂ ವಿವಿಧ ಯೋಜನೆ­ಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೋರಾಟ ನಡೆಸಿದ್ದರೂ ಇಒ ಆರ್. ಇಂದ್ರೇಶ್ ಏಕೆ ಕಾನೂನು ಕ್ರಮ ಕಯಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.

ಸೋಮೇನಹಳ್ಳಿ ಪಂಚಾಯತಿ ವ್ಯಾಪ್ತಿ­ಯಲ್ಲಿ ಶೇ 50ರಷ್ಟು ದಲಿತ ಕುಟುಂಬಗಳಿದ್ದು, ಅವರ ಆಸ್ತಿ ದಾಖ­ಲೆಗಳು ಸುಟ್ಟು ಹೋಗಿವೆ. ಇದರ ಬಗ್ಗೆ  ದ.ಸಂ.ಸ. ಮುಖಂಡರ ಅಭಿಪ್ರಾಯ­ವೇನು ಎಂದು ಪ್ರಶ್ನಿಸಿದರು.

ಸಿಪಿಎಂ ದಲಿತ ಹಕ್ಕುಗಳ ಉಪ­ಸಮಿತಿ ಖಜಾಂಚಿ ಎಲ್.ಎನ್ ಈಶ್ವ­ರಪ್ಪ, ಮುಖಂಡರಾದ ನರಸಿಂಹ­ಮೂರ್ತಿ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.