ADVERTISEMENT

ಅವಹೇಳನಕಾರಿ ವಿಡಿಯೊ; ಕ್ಷಮೆ ಕೇಳಿದ ಯುವಕ

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 7:14 IST
Last Updated 9 ಜನವರಿ 2018, 7:14 IST
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಕ್ಷಮೆ ಕೇಳುತ್ತಿರುವ ಯಾಸೀನ್‌.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ಕ್ಷಮೆ ಕೇಳುತ್ತಿರುವ ಯಾಸೀನ್‌.   

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಗ್ಗೆ ಕೆಲ ದಿನಗಳ ಹಿಂದೆ ಅವಹೇಳನಕಾರಿಯಾಗಿ ಮಾತನಾಡಿ ಚಿತ್ರಿಕರಿಸಿದ ವಿಡಿಯೊ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ನಗರದ 21ನೇ ವಾರ್ಡ್‌ ನಿವಾಸಿ ಯಾಸಿನ್‌ ಸೋಮವಾರ ಕ್ಷಮಾಪಣೆ ಕೇಳಿದ್ದಾರೆ.

ಈ ಬಗ್ಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ಸೋಮವಾರ ಯಾಸಿನ್‌ ಅವರನ್ನು ಠಾಣೆಗೆ ಕರೆಯಿಸಿ ಬುದ್ಧಿ ಮಾತಿನ ಜತೆಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ಇದೇ ವೇಳೆ ಯುವ ಮೋರ್ಚಾ ಕಾರ್ಯಕರ್ತರು ಚಿತ್ರೀಕರಿಸಿರುವ ವಿಡಿಯೊದಲ್ಲಿ ಮಾತನಾಡಿರುವ ಯಾಸಿನ್‌, ‘ನಾನು ಬೇಕೆಂದು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಸ್ನೇಹಿತ ಅಕ್ಬರ್‌ ಸೇರಿದಂತೆ ಕೆಲವರು ಬೈಯುವಂತೆ ನನಗೆ ಹೇಳಿಕೊಟ್ಟಿದ್ದರು. ಮೋದಿ, ಆದಿತ್ಯನಾಥ್ ಅವರು ನಮಗೆ ಮೋಸ ಮಾಡಿಲ್ಲ. ಒಳ್ಳೆಯದೇ ಮಾಡಿದ್ದಾರೆ. ಆದರೆ ಸ್ನೇಹಿತರು ನನ್ನ ಕೈಯಲ್ಲಿ ಹೇಳಿಸಿ ಈ ರೀತಿ ಮಾಡಿಸಿದ್ದಾರೆ. ಆದ್ದರಿಂದ ನಾನು ಅವರ ಕ್ಷಮಾಪಣೆ ಕೇಳುತ್ತೇನೆ’ ಎಂದು ಹೇಳಿದ್ದಾರೆ.

ADVERTISEMENT

‘ನಾನು ಇನ್ನೊಂದು ಬಾರಿ ಈ ರೀತಿ ತಪ್ಪು ಮಾಡುವುದಿಲ್ಲ. ಯಾರ ಉಸಾಬರಿಗೂ ಹೋಗುವುದಿಲ್ಲ. ಇಂತಹ ಕೆಲಸ ಯಾರಾದರೂ ಮಾಡಿದರೆ ತಿಳಿ ಹೇಳುತ್ತೇನೆ. ಏಕೆಂದರೆ ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು. ನನಗೆ ಹೆಂಡತಿ, ಇಬ್ಬರು ಮಕ್ಕಳಿದ್ದಾರೆ. ಬುದ್ಧಿ ಇಲ್ಲದೆ, ತಿಳಿಯದೆ ಇಂತಹ ತಪ್ಪು ಮಾಡಿರುವೆ. ಈಗ ಬುದ್ಧಿ ಬಂದಿದೆ ಕ್ಷಮಿಸಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.